ADVERTISEMENT

ಕಮಲನಾಥ ಸರ್ಕಾರಕ್ಕೆ ಕುತ್ತು: ಗುರುಗ್ರಾಮದಲ್ಲಿ ಬಿಜೆಪಿ ಶಾಸಕರು, ಮುಂದೇನು?

ಏಜೆನ್ಸೀಸ್
Published 11 ಮಾರ್ಚ್ 2020, 3:10 IST
Last Updated 11 ಮಾರ್ಚ್ 2020, 3:10 IST
ಗುರುಗ್ರಾಮದಲ್ಲಿ ಮಧ್ಯಪ್ರದೇಶದ ಬಿಜೆಪಿ ಶಾಸಕರು
ಗುರುಗ್ರಾಮದಲ್ಲಿ ಮಧ್ಯಪ್ರದೇಶದ ಬಿಜೆಪಿ ಶಾಸಕರು   
""

ಭೋಪಾಲ್‌:ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ನಿಂತ ಹೊರ ಬರುವ ಜೊತೆಗೆ ಮಧ್ಯ ಪ್ರದೇಶ ಕಾಂಗ್ರೆಸ್‌ನ 22 ಶಾಸಕರು ರಾಜೀನಾಮೆ ಸಲ್ಲಿಸಿರುವುದು ಕಮಲನಾಥ್‌ ನೇತೃತ್ವದ ಸರ್ಕಾರವನ್ನು ಪತನದ ಅಂಚಿಗೆ ಸಿಲುಕಿಸಿದೆ. ಇದರೊಂದಿಗೆ ಬಿಜೆಪಿ ಶಾಸಕರ ದಂಡು ರಾತ್ರೋರಾತ್ರಿ ಹೊರ ರಾಜ್ಯದ ಹೊಟೇಲ್‌ಗೆ ವಾಸ್ತವ್ಯ ಬದಲಿಸಿದ್ದಾರೆ.

ಕಾಂಗ್ರೆಸ್‌ನ 19 ಶಾಸಕರು ದೇವನಹಳ್ಳಿ ತಾಲ್ಲೂಕಿನ ನಂದಿಬೆಟ್ಟ ಸಮೀಪದಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇತರೆ ಬಿಜೆಪಿ ಮತ್ತು ಕಾಂಗ್ರೆಸ್‌ ಶಾಸಕರು ಮಧ್ಯ ಪ್ರದೇಶದಿಂದ ಹೊರಗೆ ಐಷಾರಾಮಿ ರೆಸಾರ್ಟ್‌, ಹೊಟೇಲ್‌ಗಳಲ್ಲಿ ಸೇರಿದ್ದಾರೆ.

ಬಿಜೆಪಿ ಮುಖಂಡರು ತಮ್ಮ ಪಕ್ಷದ ಶಾಸಕರನ್ನು ಮಧ್ಯ ರಾತ್ರಿಯೇ ಹರಿಯಾಣದ ಗುರುಗ್ರಾಮದಲ್ಲಿರುವ ಐಟಿಸಿ ಗ್ರ್ಯಾಂಡ್‌ ಭಾರತ್‌ ಹೊಟೇಲ್‌ಗೆ ಕರೆದೊಯ್ದರು. ಭೋಪಾಲ್‌ನಲ್ಲಿರುವ ಕಾಂಗ್ರೆಸ್‌ ಮುಖಂಡರು ಬುಧವಾರ ಬೆಳಿಗ್ಗೆ ಜೈಪುರದತ್ತ ಪ್ರಯಾಣಿಸುವ ಸಾಧ್ಯತೆ ಹೆಚ್ಚಿದೆ.

ADVERTISEMENT

* ಮಧ್ಯಪ್ರದೇಶ ವಿಧಾನಸಭಾ ಸ್ಥಾನಗಳು: 230

ಬಹುಮತ ಸಾಬೀತಿಗೆ ಬೇಕಾದ ಸಂಖ್ಯಾ ಬಲ 115

ಕಾಂಗ್ರೆಸ್: 114

ಬಿಜೆಪಿ: 109

ಇತರೆ: 07

ಮಧ್ಯ ಪ್ರದೇಶದ ಬಿಜೆಪಿ ಶಾಸಕರು ಉಳಿದುಕೊಂಡಿರುವ ಹರಿಯಾಣದಲ್ಲಿ ಮನೋಹರ್‌ ಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ರಾಜೀನಾಮೆ ನೀಡಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಕಾಂಗ್ರೆಸ್‌ ಬಳಗವು ಕರ್ನಾಟಕದಲ್ಲಿದ್ದು, ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವಿದೆ. ಇನ್ನು ಉಳಿದ ಕಾಂಗ್ರೆಸ್‌ ಮುಖಂಡರು ಪ್ರಯಾಣಿಸಲಿರುವ ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವಿದೆ.

ಬಂಡಾಯ ಎದ್ದಿರುವ ಕಾಂಗ್ರೆಸ್‌ ಶಾಸಕರನ್ನು ಸಮಾಧಾನ ಪಡಿಸಿ ಕರೆತರು ಮುಖಂಡರಾದ ಸಜ್ಜನ್‌ ಸಿಂಗ್‌ ವರ್ಮಾ ಮತ್ತು ಗೋವಿಂದ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಬೆಂಗಳೂರಿಗೆ ಕಳುಹಿಸಿದೆ. ಮಂಗಳವಾರ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು 22 ಶಾಸಕರ ದಿಢೀರ್ ರಾಜೀನಾಮೆ ಕಾಂಗ್ರೆಸ್‌ಗೆ ಬರಸಿಡಿಲಿನಂತೆ ಎರಗಿತು. ಇದೀಗ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಸಕಲ ಪ್ರಯತ್ನ ನಡೆಸುತ್ತಿದೆ.

ಸಿಂಧಿಯಾ ಕಾಂಗ್ರೆಸ್‌ ಬಿಡುವ ನಿರ್ಧಾರ ಮುಖಂಡರಿಗೆ ರವಾನಿಸುತ್ತಿದ್ದಂತೆ ಆರು ಸಚಿವರೂ ಸಹ ರಾಜೀನಾಮೆ ನೀಡಿದರು. 'ಆತಂಕ ಪಡುವ ಅಗತ್ಯವಿಲ್ಲ. ಬಹುಮತ ಸಾಬೀತು ಪಡಿಸಲು ಕಾಂಗ್ರೆಸ್‌ ಈಗಲೂ ಸಾಧ್ಯವಿದೆ' ಎಂದು ಮುಖ್ಯಮಂತ್ರಿ ಕಮಲನಾಥ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ತಮ್ಮ ಪಕ್ಷದ ಮುಖಂಡರನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ.

ಸಿಂಧಿಯಾಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದ್ದು, ಮಧ್ಯ ಪ್ರದೇಶದಿಂದ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುವುದು ಎಂದೂ ಹೇಳಲಾಗುತ್ತಿದೆ.

ದೇವನಹಳ್ಳಿ ಸಮೀಪದ ರೆಸಾರ್ಟ್‌ನಲ್ಲಿ ತಂಗಿರುವ ಕಾಂಗ್ರೆಸ್‌ ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ಪ್ರದರ್ಶಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.