ADVERTISEMENT

ಪರಿಷತ್‌ಗೆ ನಾಮನಿರ್ದೇಶನ: ಗೃಹ ಸಚಿವ ಶಾ ಭೇಟಿ ಮಾಡಿದ ‘ಮಹಾ’ ರಾಜ್ಯಪಾಲ ಕೋಶ್ಯಾರಿ

ಸಂಪುಟದ ಪ್ರಸ್ತಾವನೆ ಕುರಿತು ನಿರ್ಧಾರ * ಬಾಂಬೈ ಹೈಕೋರ್ಟ್‌ ಆದೇಶ

ಪಿಟಿಐ
Published 14 ಆಗಸ್ಟ್ 2021, 7:57 IST
Last Updated 14 ಆಗಸ್ಟ್ 2021, 7:57 IST
ರಾಜ್ಯಪಾಲ ಭಗತ್‌ ಸಿಂಗ್ ಕೋಶ್ಯಾರಿ
ರಾಜ್ಯಪಾಲ ಭಗತ್‌ ಸಿಂಗ್ ಕೋಶ್ಯಾರಿ   

ಮುಂಬೈ(ಪಿಟಿಐ): ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್‌ ಕೋಶ್ಯಾರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ.

ವಿಧಾನಪರಿಷತ್ ಸದಸ್ಯರ ನಾಮನಿರ್ದೇಶನದ ಬಗ್ಗೆ ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುವುದು ರಾಜ್ಯಪಾಲರ ಕರ್ತವ್ಯ ಎಂಬುದಾಗಿ ಬಾಂಬೆ ಹೈಕೋರ್ಟ್‌ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಗೃಹ ಸಚಿವ ಅಮಿತ್‌ ಶಾ ಅವರನ್ನು ರಾಜ್ಯಪಾಲರು ಭೇಟಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ರಾಜಭವನ, ಇದೊಂದು ‘ಸೌಜನ್ಯದ ಭೇಟಿ’ ಎಂದು ಹೇಳಿದೆ.

ADVERTISEMENT

12 ಜನರನ್ನು ವಿಧಾನ ಪರಿಷತ್ತಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡುವ ಸಂಬಂಧ ಮಹಾರಾಷ್ಟ್ರ ಸಚಿವ ಸಂಪುಟ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ಈ ಕುರಿತು ನಿರ್ಧಾರ ಕೈಗೊಳ್ಳದೇ ಇರುವುದು ರಾಜ್ಯಪಾಲ ಕೋಶ್ಯಾರಿ ಹಾಗೂ ಮಹಾ ವಿಕಾಸ್‌ ಆಘಾಡಿ (ಎಂವಿಎ) ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.

ಈ ನಡುವೆ, ನಾಸಿಕ್‌ನ ನಿವಾಸಿಯೊಬ್ಬರು ವಿಧಾನ ಪರಿಷತ್‌ಗೆ ನಾಮನಿರ್ದೇಶನಕ್ಕೆ ಸಂಬಂಧಿಸಿ ತ್ವರಿತವಾಗಿ ನಿರ್ಧಾರ ಕೈಗೊಳ್ಳಲು ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿತು.

‘12 ಜನರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವಂತೆ ರಾಜ್ಯ ಸಚಿವ ಸಂಪುಟ ಸಲ್ಲಿಸಿರುವ ಪ್ರಸ್ತಾವನೆಗೆ ನಿಗದಿತ ಅವಧಿಗೊಳಗೆ ಅನುಮೋದಿಸುವ ಅಥವಾ ತಿರಸ್ಕರಿಸುವ ಸಾಂವಿಧಾನಿಕ ಹೊಣೆಗಾರಿಕೆ ರಾಜ್ಯಪಾಲರದ್ದು’ ಎಂದು ಪೀಠ ಹೇಳಿತ್ತು.

‘ಪ್ರಸ್ತಾವನೆ ಸಲ್ಲಿಸಿ 8 ತಿಂಗಳು ಕಳೆದಿವೆ. ತೀರ್ಮಾನ ಕೈಗೊಳ್ಳಲು ಇದು ನ್ಯಾಯಸಮ್ಮತ ಅವಧಿ. ಆದರೂ ರಾಜ್ಯಪಾಲರು ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.