ADVERTISEMENT

ಕುಂಭಮೇಳ |ನಿನ್ನೆ 5 ಕೋಟಿ ಭಕ್ತರಿಂದ ಪವಿತ್ರ ಸ್ನಾನ:ಇಂದು 10 ಕೋಟಿ ಭಕ್ತರು ಭಾಗಿ?

ಪಿಟಿಐ
Published 29 ಜನವರಿ 2025, 5:00 IST
Last Updated 29 ಜನವರಿ 2025, 5:00 IST
<div class="paragraphs"><p>ಮಹಾ ಕುಂಭಮೇಳ</p></div>

ಮಹಾ ಕುಂಭಮೇಳ

   

ಪಿಟಿಐ

ಮಹಾಕುಂಭನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಪ್ರಯುಕ್ತ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರ ಸಂಖ್ಯೆ 20 ಕೋಟಿ ದಾಟಿದೆ ಎಂದು ಸರ್ಕಾರ ತಿಳಿಸಿದೆ.

ADVERTISEMENT

ಮೌನಿ ಅಮಾವಾಸ್ಯೆ ಮುನ್ನ ದಿನವಾದ ಮಂಗಳವಾರ ತ್ರಿವೇಣಿ ಸಂಗಮದಲ್ಲಿ ಐದು ಕೋಟಿ ಯಾತ್ರಾರ್ಥಿಗಳು ಪುಣ್ಯ ಸ್ನಾನ ಮಾಡಿದ್ದು, ಇದು ಈ ಹಿಂದಿನ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದೆ. ಭಾನುವಾರ ಮತ್ತು ಸೋಮವಾರದಂದು 3 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮೌನಿ ಅಮಾವಾಸ್ಯೆ ದಿನವಾದ ಇಂದು (ಬುಧವಾರ) ತ್ರಿವೇಣಿ ಸಂಗಮದಲ್ಲಿ ಮಿಂದೇಳಲು ಅಪಾರ ಭಕ್ತಸಾಗರವೇ ಪ್ರಯಾಗ್‌ರಾಜ್‌ನಲ್ಲಿ ಜಮಾಯಿಸಿದೆ. ಮಹಾಕುಂಭಮೇಳದ ಎರಡನೇ ‘ಪವಿತ್ರ ಸ್ನಾನ’ ಇದಾಗಿದ್ದು, 10 ಕೋಟಿ ಭಕ್ತರು ಸಂಗಮದಲ್ಲಿ ಮಿಂದೇಳುವ ನಿರೀಕ್ಷೆಯಿದೆ.

ಸಂಗಮದ ಸುತ್ತಮುತ್ತ ಕಣ್ಣು ಹಾಯಿಸಿದಷ್ಟು ದೂರ ಜನಸಾಗರವೇ ಸೇರಿದೆ. ಮಂಗಳವಾರವೇ ಅಸಂಖ್ಯಾತ ಭಕ್ತರು ಪ್ರಯಾಗ್‌ರಾಜ್‌ನಲ್ಲಿ ಬೀಡುಬಿಟ್ಟಿದ್ದು, ಜನದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದತ್ತ (ಗಂಗಾ, ಯಮುನಾ, ಸರಸ್ವತಿ ನದಿ ಸೇರುವ ಸ್ಥಳ) ಅಸಂಖ್ಯಾತ ಜನರು ಸೇರುತ್ತಿದ್ದಾರೆ. ತ್ರಿವೇಣಿ ಮಾರ್ಗ, ಕಾಳಿ ಮಾರ್ಗ, ನಾಗ್‌ ವಾಸುಕಿ ರಸ್ತೆ, ಝೂಸಿ ರಸ್ತೆ, ಸಂಗಮ್‌ ಬೌಡ್‌ ರಸ್ತೆ ಸೇರಿದಂತೆ ಹಲವು ರಸ್ತೆಗಳು ಕಿಕ್ಕಿರಿದ ಜನರಿಂದ ತುಂಬಿವೆ. ಕುಂಭಮೇಳದ ಸ್ಥಳವನ್ನು ‘ವಾಹನರಹಿತ ವಲಯ’ ಎಂದು ಘೋಷಿಸಲಾಗಿದೆ.

ಜನವರಿ 13 ರಂದು ಆರಂಭವಾಗಿರುವ ಮಹಾಕುಂಭಮೇಳವು ಫೆಬ್ರುವರಿ 26ರವರೆಗೆ ನಡೆಯಲಿದೆ. ಈ ಬಾರಿ ಕುಂಭಮೇಳಕ್ಕೆ 45 ಕೋಟಿ ಜನ ಆಗಮಿಸುವ ನಿರೀಕ್ಷೆ ಇದೆ ಎಂದು ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.