ADVERTISEMENT

ಮೌನಿ ಅಮಾವಾಸ್ಯೆ; ಮಹಾಕುಂಭ ಮೇಳದತ್ತ ಲಕ್ಷಾಂತರ ಭಕ್ತರ ದಂಡು: ಭದ್ರತೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 11:24 IST
Last Updated 28 ಜನವರಿ 2025, 11:24 IST
<div class="paragraphs"><p>ಮಹಾಕುಂಭ ಮೇಳದಲ್ಲಿ ನೆರೆದಿರುವ ಜನಸ್ತೋಮ&nbsp;</p></div>

ಮಹಾಕುಂಭ ಮೇಳದಲ್ಲಿ ನೆರೆದಿರುವ ಜನಸ್ತೋಮ 

   

ಚಿತ್ರಕೃಪೆ : @MahaKumbh_2025

ಲಖನೌ: ಮಹಾಕುಂಭ ಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಕೈಗೊಳ್ಳುತ್ತಿದ್ದಾರೆ. ಈ ನಡುವೆ ನಾಳೆ (ಬುಧವಾರ) ಮೌನಿ ಅಮಾವಾಸ್ಯೆ ಇರುವ ಕಾರಣ ಎರಡನೇ ಅಮೃತ ಸ್ನಾನ ಕೈಗೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

ADVERTISEMENT

ಸಂಗಮದತ್ತ ಭಕ್ತರ ದಂಡು ಸಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಹಾಕುಂಭ ನಗರದ ತ್ರಿವೇಣಿ ಮಾರ್ಗ, ಕಾಳಿ ಮಾರ್ಗ ಸೇರಿದಂತೆ ಸಂಗಮದ ಸುತ್ತಮುತ್ತಲಿನ ರಸ್ತೆಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ಜನರ ನಿಯಂತ್ರಣಕ್ಕೆ ಅಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ. ಭಕ್ತರ ಓಡಾಟಕ್ಕೆ ಅನುಕೂಲವಾಗಲು ಈ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇತರ ರಾಜ್ಯ, ದೇಶಗಳಿಂದ ಬರುವ ವಾಹನಗಳಿಗೆ ನಗರದ ಹೊರವಲಯದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಜನರನ್ನು ನಿಯಂತ್ರಿಸಲು ಸಂಗಮದ ಸುತ್ತಮುತ್ತಲಿನ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಮೌನಿ ಅಮಾವಾಸ್ಯೆ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚುವ ಕಾರಣ ಐದು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಇಂಟಿಗ್ರೇಟೆಡ್ ಕಂಟ್ರೋಲ್ ಮತ್ತು ಕಮಾಂಡ್ ಸೆಂಟರ್ ಸಂಗಮದ ಬಳಿ ನಿಗಾ ಇರಿಸಲಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ 3 ಕೋಟಿ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ. ಮಂಗಳವಾರ (ಇಂದು) ರಾತ್ರಿಯಿಂದ ಮೌನಿ ಅಮಾವಾಸ್ಯೆಯ ಅಮೃತ ಸ್ನಾನ ಆರಂಭವಾಗಲಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಯಾಗರಾಜ್‌ಗೆ ಬಂದ ಭಕ್ತರು ಹತ್ತಿರದ ಅಯೋಧ್ಯೆ ಮತ್ತು ವಾರಾಣಸಿಗೂ ಭೇಟಿ ಕೊಡುತ್ತಿರುವ ಕಾರಣ ಜನಸಂದಣಿ ಉಂಟಾಗಿದ್ದು, ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ಅಯೋಧ್ಯೆ ರಾಮ ಮಂದಿರ ಮತ್ತು ಕಾಶಿ ವಿಶ್ವನಾಥ ದೇವಾಲಯಗಳಲ್ಲಿ ತಡರಾತ್ರಿಯವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.