ADVERTISEMENT

Maha Kumbh | ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಪಾಲಿಸುವವರಿಗೆ ವಿಶೇಷ ದಿನ: ಮೋದಿ

ಪಿಟಿಐ
Published 13 ಜನವರಿ 2025, 5:33 IST
Last Updated 13 ಜನವರಿ 2025, 5:33 IST
<div class="paragraphs"><p> ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾನದಿ ತಟದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳವು ಇಂದಿನಿಂದ (ಸೋಮವಾರ) ಆರಂಭಗೊಂಡಿದ್ದು, ಸಾಧು–ಸಂತರು ಸೇರಿ ದೇಶ–ವಿದೇಶಗಳಿಂದ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ.

ADVERTISEMENT

‘ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಪಾಲಿಸುವ ಕೋಟ್ಯಂತರ ಜನರಿಗೆ ಇದು ಅತ್ಯಂತ ವಿಶೇಷವಾದ ದಿನವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

‘ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ಆರಂಭವಾಗಿದೆ. ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಪವಿತ್ರ ಸಂಗಮದಲ್ಲಿ ಅಸಂಖ್ಯಾತ ಜನರನ್ನು ಒಟ್ಟಾಗಿ ಸೇರಲಿದ್ದಾರೆ. ಮಹಾಕುಂಭವು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಸಾಕಾರಗೊಳಿಸುವುದರ ಜತೆಗೆ ನಂಬಿಕೆ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಪುಷ್ಯ ಪೂರ್ಣಿಮೆ ದಿನದ ಶುಭಾಶಯಗಳು. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೂಟ ‘ಮಹಾಕುಂಭ’ ಇಂದಿನಿಂದ ಪವಿತ್ರ ನಗರವಾದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿದೆ. ಇದು ಸಂಸ್ಕೃತಿಗಳ ಸಂಗಮ ಮತ್ತು ವಿವಿಧತೆಯಲ್ಲಿ ಏಕತೆಯ ಸಂದೇಶವಾಗಿದೆ. ಸಂಗಮದಲ್ಲಿ ಧ್ಯಾನ ಮಾಡಲು ಮತ್ತು ಪವಿತ್ರ ಸ್ನಾನ ಮಾಡಲು ಬಂದಿರುವ ಎಲ್ಲಾ ಪೂಜ್ಯ ಸಂತರು ಮತ್ತು ಭಕ್ತರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಗಂಗಾ ಮಾತೆ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸಲಿ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಫೆಬ್ರುವರಿ 26ರವರೆಗೆ 45 ದಿನ ಮೇಳ ನಡೆಯಲಿದ್ದು, ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಆಸುಪಾಸು 10 ಸಾವಿರ ಎಕರೆಯಷ್ಟು ವಿಸ್ತೀರ್ಣದಲ್ಲಿ ಸಿದ್ಧತೆ ಕೈಗೊಳ್ಳಲಾಗಿದ್ದು, 25 ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಈ ಬಾರಿ ನಡೆಯುತ್ತಿರುವುದು 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ. ಹಿಂದಿನ ಬಾರಿ ಕುಂಭ ಮೇಳದಲ್ಲಿ 24 ಕೋಟಿ ಮಂದಿ ಭಾಗವಹಿಸಿದ್ದರು. ಈ ಬಾರಿ ಮಹಾಕುಂಭ ಮೇಳದಲ್ಲಿ 45 ಕೋಟಿ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.