ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಕೈಗೊಂಡ ಸಾಧುಗಳು
ಪಿಟಿಐ ಚಿತ್ರ
ಮಹಾಕುಂಭ ನಗರ (ಉತ್ತರ ಪ್ರದೇಶ): ಮಹಾಕುಂಭ ಮೇಳದ ಮೂರನೇ ‘ಅಮೃತ ಸ್ನಾನ’ ತ್ರಿವೇಣಿ ಸಂಗಮದಲ್ಲಿ ಸೋಮವಾರ ಸುಸೂತ್ರವಾಗಿ ನಡೆಯಿತು. ದೇಶದ ವಿವಿಧ ಭಾಗಗಳು ಮತ್ತು ವಿದೇಶಗಳ ಲಕ್ಷಾಂತರ ಭಕ್ತರು ‘ವಸಂತ ಪಂಚಮಿ’ಯ ಪವಿತ್ರ ಸ್ನಾನದಲ್ಲಿ ಪಾಲ್ಗೊಂಡರು.
ಜನವರಿ 29ರಂದು ‘ಮೌನಿ ಅಮಾವಾಸ್ಯೆ’ ದಿನ ನಡೆದ ಅಮೃತ ಸ್ನಾನದ ವೇಳೆ ಉಂಟಾದ ಕಾಲ್ತುಳಿತದಲ್ಲಿ 30 ಭಕ್ತರು ಮೃತಪಟ್ಟಿದ್ದರು. ಇಂಥ ಅವಘಡಗಳು ಮರುಕಳಿಸದಿರಲಿ ಎಂದು ಕುಂಭಮೇಳದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದರು.
ಉತ್ತರ ಪ್ರದೇಶ ಸರ್ಕಾರವು ಮೇಳದ ವಲಯದ ವ್ಯವಸ್ಥೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿತ್ತು. ದಟ್ಟಣೆ ನಿರ್ವಹಣೆ ಹಾಗೂ ಭಕ್ತರ ಸುರಕ್ಷತೆ ಖಾತ್ರಿಪಡಿಸುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ತೆಗೆದುಕೊಂಡಿತ್ತು. ಇದರಿಂದ ಸೋಮವಾರ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
ಮೌನಿ ಅಮಾವಾಸ್ಯೆ ದಿನದಂದು ಭಕ್ತರು ಸಂಗಮ ಸ್ಥಳದಲ್ಲಿ ಪವಿತ್ರ ಸ್ನಾನಕ್ಕೆ ಮುಗಿಬಿದ್ದದ್ದರಿಂದ ಅಲ್ಲಿ ನೂಕುನುಗ್ಗಲು ಉಂಟಾಗಿತ್ತು. ಆದರೆ, ಸೋಮವಾರ ಭಕ್ತರು ಸಂಗಮ ಸ್ಥಾನದಲ್ಲೇ ಸ್ನಾನಕ್ಕೆ ಮುಂದಾಗದೆ, ವಿವಿಧ ಘಾಟ್‌ಗಳಲ್ಲಿ ಪವಿತ್ರ ಸ್ನಾನ ಮಾಡಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಲಖನೌದ ತಮ್ಮ ನಿವಾಸದಿಂದ ಬೆಳಿಗ್ಗೆ 3.30ರಿಂದಲೇ ಸಂಗಮ ಸ್ಥಳದಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗಮ ಸ್ಥಳದಲ್ಲಿ ದಟ್ಟಣೆ ನಿರ್ವಹಣೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಮಹಾಕುಂಭದ ಡಿಐಜಿ ವೈಭವ್ ಕೃಷ್ಣ ತಿಳಿಸಿದ್ದಾರೆ. ‘ಅಮೃತ ಸ್ನಾನ ಪ್ರಕ್ರಿಯೆ ಸುಸೂತ್ರವಾಗಿ ನೆರವೇರಿತು. ಹಿರಿಯ ಪೊಲೀಸ್ ಅಧಿಕಾರಿಗಳನ್ನೂ ಸ್ಥಳದಲ್ಲಿ ನಿಯೋಜಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.
ವಿವಿಧ ಅಖಾಡಗಳ ಸನ್ಯಾಸಿಗಳು ಮತ್ತು ಸಾಧುಗಳು ಮೊದಲು ಪವಿತ್ರ ಸ್ನಾನ ಮಾಡಿದರು. ನಾಗಾ ಸಾಧುಗಳು ಭವ್ಯ ಮೆರವಣಿಗೆಯಲ್ಲಿ ಸಂಗಮ ಸ್ಥಾನಕ್ಕೆ ಬಂದರು. ಬೆಳಿಗ್ಗೆ 10ರ ವೇಳೆಗೆ 80 ಲಕ್ಷಕ್ಕೂ ಅಧಿಕ ಮಂದಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರದ ಪ್ರಕಟಣೆ ತಿಳಿಸಿದೆ.
ಪಂಚಾಯತಿ ಅಖಾಡ ಮಹಾನಿರ್ವಾಣಿ, ಶಂಭು ಪಂಚಾಯತಿ ಅಟಲ್ ಅಖಾಡ, ತಪೋನಿಧಿ ಪಂಚಾಯಿತಿ ನಿರಂಜನಿ ಅಖಾಡ, ಪಂಚಾಯತಿ ಅಖಾಡ ಆನಂದ್, ಜುನಾ ಅಖಾಡ, ಆವಾಹನ್ ಆಖಾಡ ಮತ್ತು ಪಂಚಾಗ್ನಿ ಅಖಾಡದ ಸದಸ್ಯರು ಮೊದಲು ಸಂಗಮಕ್ಕೆ ಬಂದರು. ‘ಅಮೃತ ಸ್ನಾನ’ಕ್ಕೆ ಪ್ರತಿ ಅಖಾಡಕ್ಕೆ 40 ನಿಮಿಷ ನಿಗದಿಪಡಿಸಲಾಗಿತ್ತು.
ಉತ್ತರ ಪ್ರದೇಶ ಸರ್ಕಾರದ ಮಾಹಿತಿಯಂತೆ ‘ಮೌನಿ ಅಮಾವಾಸ್ಯೆ’ ದಿನ ಸಂಗಮದಲ್ಲಿ ಸುಮಾರು 8 ಕೋಟಿ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಮಕರ ಸಂಕ್ರಾಂತಿ ದಿನದಂದು 3.5 ಕೋಟಿ ಮಂದಿ, ಜನವರಿ 30 ಮತ್ತು ಫೆಬ್ರುವರಿ 1ರಂದು ತಲಾ 2 ಕೋಟಿ ಮಂದಿ ಹಾಗೂ ‘ಪುಷ್ಯ ಪೂರ್ಣಿಮಾ’ (ಜನವರಿ 13) ದಿನದಂದು 1.7 ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ.
ಬೆಳಗಿನ ಜಾವ 4ಕ್ಕೆ ‘ಅಮೃತ ಸ್ನಾನ’ ಆರಂಭ ಭಕ್ತರ ಮೇಲೆ ಹೆಲಿಕಾಪ್ಟರ್‌ನಿಂದ ಹೂಮಳೆ ನಾಗಾ ಸಾಧುಗಳು, ಸನ್ಯಾಸಿಗಳ ಮೆರವಣಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.