ADVERTISEMENT

ಮಹದಾಯಿ ಅಣೆಕಟ್ಟು ನಿರ್ಮಾಣ ಸ್ಥಗಿತಗೊಳಿಸುವಂತೆ ಕರ್ನಾಟಕಕ್ಕೆ ನೋಟಿಸ್‌: ಗೋವಾ CM

ಪಿಟಿಐ
Published 10 ಜನವರಿ 2023, 11:18 IST
Last Updated 10 ಜನವರಿ 2023, 11:18 IST
ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್   

ಪಣಜಿ: ಮಹದಾಯಿ ತಿರುವು ಯೋಜನೆಯಡಿ ಕಳಸಾ ಮತ್ತು ಬಂಡೂರಿ ಉಪನದಿಗಳಿಗೆ ಅಣೆಕಟ್ಟು ನಿರ್ಮಿಸುವುದನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ಪ್ರಧಾನ ವನ್ಯಜೀವಿ ಅಧಿಕಾರಿ ನೋಟಿಸ್‌ ನೀಡಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಹೇಳಿದ್ದಾರೆ.

ಮಹದಾಯಿ ನದಿ ತಿರುವು ಯೋಜನೆ ವಿವಾದದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಚರ್ಚಿಸಲು ಸಾವಂತ್‌ ಅವರು ಉನ್ನತ ಅಧಿಕಾರಿಗಳು ಹಾಗೂ ಮಹದಾಯಿ ಬಚಾವೊ ಅಭಿಯಾನದ ಸದಸ್ಯರೊಂದಿಗೆ ಸೋಮವಾರ ಸಭೆ ನಡೆಸಿದ್ದರು. ನಂತರ, ಅವರು ಈ ಕುರಿತು ಟ್ವೀಟ್‌ ಮಾಡಿದ್ದಾರೆ.

‘ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಗೋವಾದ ಹಿತಾಸಕ್ತಿ ಕಾಪಾಡುವುದಕ್ಕೆ ಸಂಬಂಧಿಸಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಸಭೆಗೆ ವಿವರಿಸಲಾಯಿತು. ಮಹದಾಯಿ ಬಚಾವೊ ಆಂದೋಲನ ಸದಸ್ಯರು ಸಹ ಉತ್ತಮ ಸಲಹೆಗಳನ್ನು ನೀಡಿದ್ದು, ಒಟ್ಟಾರೆ ಸಭೆಯು ಫಲಪ್ರದವಾಗಿತ್ತು’ ಎಂದು ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ADVERTISEMENT

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಡ್ವೊಕೇಟ್‌ ಜನರಲ್ ದೇವಿದಾಸ್ ಪಂಗಮ್, ‘ಕರ್ನಾಟಕದ ಡಿಪಿಆರ್‌ಗೆ ಒಪ್ಪಿಗೆ ನೀಡಿರುವುದನ್ನು ಪ್ರಶ್ನಿಸಿ ಗೋವಾ ಸರ್ಕಾರವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ’ ಎಂದರು.

ಆಂದೋಲನದ ಅಧ್ಯಕ್ಷೆ ನಿರ್ಮಲಾ ಸಾವಂತ್, ಪರಿಸರ ಹೋರಾಟಗಾರ ರಾಜೇಂದ್ರ ಕೇರ್ಕರ್ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.