ADVERTISEMENT

ಮಹದಾಯಿ: ಸ್ಥಳ ಪರಿಶೀಲನೆಗೆ ‘ಸುಪ್ರೀಂ’ ಸೂಚನೆ

ಗೋವಾ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 18:00 IST
Last Updated 22 ಫೆಬ್ರುವರಿ 2021, 18:00 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕರ್ನಾಟಕವು ಕಳಸಾ ತಿರುವು ಯೋಜನೆ ಮೂಲಕ ಮಲಪ್ರಭಾ ನದಿಗೆ ಅಕ್ರಮವಾಗಿ ನೀರು ಹರಿಸಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ.

‘ಮಲಪ್ರಭಾ ನದಿಗೆ ಮಹದಾಯಿಯ ನೀರನ್ನು ಅಕ್ರಮವಾಗಿ ಹರಿಸುವ ಮೂಲಕ ಕರ್ನಾಟಕ ಸರ್ಕಾರ ನ್ಯಾಯಾಂಗ ನಿಂದನೆ ಎಸಗಿದೆ’ ಎಂದು ಆರೋಪಿಸಿ ಗೋವಾ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠ, ಕಣಿವೆ ವ್ಯಾಪ್ತಿಯ ಮೂರೂ ರಾಜ್ಯಗಳ ಸದಸ್ಯರನ್ನು ಒಳಗೊಂಡ ಜಂಟಿ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ನಾಲ್ಕು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತು.

ಕೊರೊನಾ ಲಾಕ್‌ಡೌನ್‌ ಸಂದರ್ಭ ಕರ್ನಾಟಕವು ಸದ್ದಿಲ್ಲದೆ ಮಹದಾಯಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಮೂಲಕ ಆದೇಶ ಉಲ್ಲಂಘಿಸಿದೆ ಎಂದು ಗೋವಾ ಪರ ವಕೀಲ ಪಿ.ಎಸ್‌. ನರಸಿಂಹ ವಿಚಾರಣೆ ವೇಳೆ ದೂರಿದರು.

ADVERTISEMENT

ರಾಜ್ಯದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ವಕೀಲರಾದ ಮೋಹನ್‌ ಕಾತರಕಿ ಹಾಗೂ ನಿಶಾಂತ್‌ ಪಾಟೀಲ ಅವರು ಗೋವಾದ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.

ಕಳೆದ ವರ್ಷದ ಮಾರ್ಚ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ನೀರನ್ನು ತಿರುವದಂತೆ 2014ರ ಏಪ್ರಿಲ್‌ 17ರಂದು ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಈ ಆದೇಶ ಪಾಲಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು.

ಕರ್ನಾಟಕಕ್ಕೆ 13.42 ಟಿಎಂಸಿ ಅಡಿ, ಗೋವಾಗೆ 24 ಟಿಎಂಸಿ ಅಡಿ ಹಾಗೂ ಮಹಾರಾಷ್ಟ್ರಕ್ಕೆ 1.30 ಟಿಎಂಸಿ ಅಡಿ ಮಹದಾಯಿ ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ 2018ರ ಆಗಸ್ಟ್‌ 14ರಂದು ನೀಡಿರುವ ಐತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರವು 2020ರ ಫೆಬ್ರುವರಿ 27ರಂದು ಅಧಿಸೂಚನೆ ಹೊರಡಿಸಿದ್ದು, ರಾಜ್ಯ ಸರ್ಕಾರ ಯೋಜನೆಗಾಗಿ ಅನುದಾನ ಮೀಸಲಿರಿಸುವುದಾಗಿ ಪ್ರಕಟಿಸಿತ್ತು.

ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಐತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.