ADVERTISEMENT

'ಮಹಾ' ಸೋಲಿಗೆ ಕಾಂಗ್ರೆಸ್ ಕಾರಣ ಎಂದ ಶಿವಸೇನಾ ನಾಯಕ; MVA ಮೈತ್ರಿಯಲ್ಲಿ ಬಿರುಕು?

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 15:10 IST
Last Updated 28 ನವೆಂಬರ್ 2024, 15:10 IST
<div class="paragraphs"><p>‘ಇಂಡಿಯಾ’ ಮೈತ್ರಿಕೂಟದ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್</p></div>

‘ಇಂಡಿಯಾ’ ಮೈತ್ರಿಕೂಟದ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್

   

ಪಿಟಿಐ ಚಿತ್ರ

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಉದ್ಧವ್‌ ಠಾಕ್ರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಅಂಬಾದಾಸ್‌ ದಾನ್ವೆ ಗುರುವಾರ ಹೇಳಿಕೆ ನೀಡಿದ್ದಾರೆ. ಇದು, ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದಲ್ಲಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸಿದೆ.

ADVERTISEMENT

ಉದ್ಧವ್ ನೇತೃತ್ವದ ಶಿವಸೇನಾ (ಶಿವಸೇನಾ-ಯುಬಿಟಿ), ಮುಂಬರುವ ಸ್ಥಳೀಯ ಹಾಗೂ ನಾಗರಿಕ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ಬುಧವಾರ ವರದಿಯಾಗಿತ್ತು. ಇದರ ಬೆನ್ನಲ್ಲೇ, ದಾನ್ವೆ ನೀಡಿರುವ ಹೇಳಿಕೆಯು ಎಂವಿಎ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್‌ ಮತ್ತು ಶರದ್‌ ಪವಾರ್‌ ಅವರ ಎನ್‌ಸಿಪಿ (ಎಸ್‌ಪಿ) ನಾಯಕರನ್ನು ಕೆರಳಿಸಿದೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ದಾನ್ವೆ, 'ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ ಪಕ್ಷವು ಅತಿಯಾದ ಉತ್ಸಾಹದಿಂದ ಬೀಗಿತ್ತು. ಆ ಪಕ್ಷವು ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಗೆಲ್ಲುವ ವಾತಾವರಣ ಇತ್ತು. ಕಾಂಗ್ರೆಸ್‌ನಲ್ಲಿ ಕನಿಷ್ಠ 10 ಮಂದಿ ಮುಖ್ಯಮಂತ್ರಿ ಆಕಾಂಕ್ಷಿಗಳು ಇದ್ದರು' ಎಂದಿದ್ದಾರೆ.

'ಮಹಾ ವಿಕಾಸ ಆಘಾಡಿಯಿಂದ ಉದ್ಧವ್‌ ಠಾಕ್ರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೆ, ಚಿತ್ರಣ ಬೇರೆಯೇ ಆಗಿರುತ್ತಿತ್ತು. ಶೇ 2–5 ರಷ್ಟು ಮತಗಳು ನಮ್ಮ ಪರವಾಗಿ ಬರುತ್ತಿದ್ದವು' ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಿವಸೇನಾ ಏಕಾಂಗಿಯಾಗಿ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಾನ್ವೆ, 'ಚುನಾವಣೆಗಳಲ್ಲಿ ಗೆಲ್ಲುವುದು ಹಾಗೂ ಸೋಲುವುದು ರಾಜಕೀಯದಲ್ಲಿ ಸಾಮಾನ್ಯ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಂದಿರುವ ಫಲಿತಾಂಶವನ್ನು ನಾವು ನಿರೀಕ್ಷಿಸಿರಲಿಲ್ಲ. ಹಾಗಾಗಿ, ಪಕ್ಷದ ಉನ್ನತ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ' ಎಂದಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಠಾಕ್ರೆ ಮತ್ತು ಶಿವಸೇನಾ (ಯುಬಿಟಿ) ರಾಜ್ಯಸಭೆ ಸದಸ್ಯ ಸಂಜಯ್‌ ರಾವುತ್‌ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂದಿತ್ತು. ಕಾಂಗ್ರೆಸ್ ಅಥವಾ ಎನ್‌ಸಿಪಿ (ಎಸ್‌ಪಿ) ಪಕ್ಷದವರೇ ಅದರೂ ಯಾವುದೇ ಅಭ್ಯಂತರವಿಲ್ಲ ಎಂದು ಠಾಕ್ರೆ ಸಹ ಹೇಳಿದ್ದರು.

ಆದರೆ, ನವೆಂಬರ್‌ 23ರಂದು ಪ್ರಕಟವಾದ ಚುನಾವಣೆ ಫಲಿತಾಂಶವು ಮೂರೂ ಪಕ್ಷಗಳ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಏಕನಾಥ ಶಿಂದೆ ಅವರ ಶಿವಸೇನಾ ಮತ್ತು ಅಜಿತ್‌ ಪವಾರ್ ನೇತೃತ್ವದ ಎನ್‌ಸಿಪಿಯನ್ನೊಳಗೊಂಡ 'ಮಹಾಯುತಿ' ಮೈತ್ರಿಕೂಟ ಜಯಭೇರಿ ಬಾರಿಸಿದೆ. ಬರೋಬ್ಬರಿ 235 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರಿದೆ.

132 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷ ಎನಿಸಿಕೊಂಡಿದ್ದ ಬಿಜೆಪಿಯ ದೇವೇಂದ್ರ ಫಡಣವೀಸ್‌ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.