ADVERTISEMENT

ಆ.15ರೊಳಗೆ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ: ಫಡಣವೀಸ್‌ಗೆ ಗೃಹ ಖಾತೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 11:29 IST
Last Updated 7 ಆಗಸ್ಟ್ 2022, 11:29 IST
ಏಕನಾಥ ಶಿಂದೆ
ಏಕನಾಥ ಶಿಂದೆ   

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು 15 ಮಂದಿಗೆ ಅವಕಾಶ ನೀಡುವ ಮೂಲಕ ವಾರದೊಳಗೆ ಸಂಪುಟ ವಿಸ್ತರಿಸುವ ಸಾಧ್ಯತೆ ಇದ್ದು, ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಗೃಹ ಖಾತೆ ಉಳಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.

ಒಬಿಸಿ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ವಿಳಂಬವಾಗಿದ್ದು, ಕೋರ್ಟ್‌ನಿಂದ ಸ್ಪಷ್ಟೀಕರಣ ಬಂದ ನಂತರ ಅಕ್ಟೋಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಆ.15ರೊಳಗೆ ಸಂಪುಟ ವಿಸ್ತರಣೆ ಆಗಲಿದೆ.

ADVERTISEMENT

ಶಿಂದೆ ಹಾಗೂ ಫಡಣವೀಸ್‌ ಪ್ರಮಾಣವಚನ ಸ್ವೀಕರಿಸಿ 35 ದಿನಗಳು ಕಳೆದಿವೆ. ಆದಾಗ್ಯೂ ಸಂಪುಟ ವಿಸ್ತರಣೆ ಕಾರ್ಯ ನಡೆದಿಲ್ಲ. ಈ ಬಗ್ಗೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಸೇರಿದಂತೆ ವಿರೋಧ ಪಕ್ಷಗಳು ಟೀಕಾಪ್ರಹಾರ ನಡೆಸುತ್ತಿವೆ.

ಸಂಪುಟ ವಿಸ್ತರಣೆ ವಿಳಂಬದಿಂದ ಯಾವುದೇ ಕೆಲಸಗಳಿಗೆ ತೊಂದರೆ ಆಗಿಲ್ಲ. ನಾನು ಮತ್ತು ಉಪಮುಖ್ಯಮಂತ್ರಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಸರ್ಕಾರದ ಮೇಲೆ ಪರಿಣಾಮ ಬೀರಿಲ್ಲ. ಹಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಶಿಂದೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾ ವಿಕಾಸ ಆಘಾಡಿ (ಶಿವಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ) ಸರ್ಕಾರದ ವಿರುದ್ಧ ಶಿಂದೆ ನೇತೃತ್ವದಲ್ಲಿ ಶಿವಸೇನಾದ ಹಲವು ಶಾಸಕರು ಬಂಡಾಯ ಸಾರಿದ್ದರು. ಅದಾದ ಬಳಿಕಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ಜೂನ್ 29ರಂದು ರಾಜೀನಾಮೆ ನೀಡಿದ್ದರು. ಬಳಿಕ, ಶಿಂದೆ ಅವರು ಬಿಜೆಪಿಯ ಬೆಂಬಲದೊಂದಿಗೆ ಜೂನ್‌ 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.