
ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಬಹುನಿರೀಕ್ಷಿತ ನಗರ ಪರಿಷದ್ ಮತ್ತು ನಗರ ಪಂಚಾಯಿತಿಗಳ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭಾರಿ ಜಯ ಸಾಧಿಸಿದ್ದು, ಬಿಜೆಪಿಯು ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.
ಮಹಾಯುತಿ ಹಾಗೂ ಎನ್‌ಡಿಎ ಒಟ್ಟಾಗಿ ನಗರ ಪಂಚಾಯಿತಿಯ 200ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ರಾಜ್ಯ ಚುನಾವಣಾ ಆಯೋಗವು ಇನ್ನೂ ಅಧಿಕೃತವಾಗಿ ಫಲಿತಾಂಶವನ್ನು ಘೋಷಿಸಿಲ್ಲ.
ರಾಜ್ಯದಲ್ಲಿ ಮುಂಬರುವ 29 ಮುನ್ಸಿಪಲ್ ಕಾರ್ಪೊರೇಷನ್ ಕ್ಷೇತ್ರ, 32 ಜಿಲ್ಲಾ ಪರಿಷದ್ ಹಾಗೂ 336 ಪಂಚಾಯಿತಿ ಸಮಿತಿಗಳ ಚುನಾವಣೆಗಳ ಮೇಲೆ ಈಗಿನ ಫಲಿತಾಂಶವು ಪ್ರಭಾವ ಬೀರುವ ಸಾಧ್ಯತೆ ಇದೆ.
246 ಪರಿಷದ್ ಹಾಗೂ 42 ನಗರ ಪಂಚಾಯಿತಿ ಕ್ಷೇತ್ರಗಳು ಸೇರಿದಂತೆ 288 ಕಡೆ ಡಿ.2 ಮತ್ತು 20ರಂದು ಎರಡು ಹಂತದಲ್ಲಿ ಮತದಾನ ನಡೆಯಿತು.
ಇತ್ತೀಚಿನ ವರದಿಗಳ ಪ್ರಕಾರ ಬಿಜೆಪಿಯು 120ಕ್ಕೂ ಅಧಿಕ ನಗರ ಪರಿಷದ್ ಮತ್ತು ನಗರ ಪಂಚಾಯಿತಿಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಗೆದ್ದುಕೊಂಡಿದೆ.
ಈ ವರ್ಷ ಬಿಜೆಪಿಯು 129 ನಗರ ಪರಿಷದ್ ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ. 2017ರಲ್ಲಿ ಈ ಸಂಖ್ಯೆ 94 ಇತ್ತು. ಇದೀಗ ಶೇ45ರಷ್ಟು ಹೆಚ್ಚಾಗಿದೆ. ಮಹಾಯುತಿಯಾಗಿ ನಾವು 215 ನಗರ ಪರಿಷದ್ ಚುನಾವಣೆಗಳಲ್ಲಿ ಜಯ ಗಳಿಸಿದ್ದೇವೆ. ಇದು ಶೇ74.65ರಷ್ಟು ಹೆಚ್ಚಳವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದರು.
ವಿಧಾನಸಭೆ ಚುನಾವಣೆಯಂತೆ ಜನಾದೇಶ ನಮ್ಮ ಪರವಾಗಿದೆ. ಬಿಜೆಪಿ ಮತ್ತೆ ನಂ.1 ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಹಾಗೂ ಅದರ ಮಹಾಯುತಿ ಮೈತ್ರಿ ಪಕ್ಷಗಳಾದ ಶಿವಸೇನೆ (ಏಕನಾಥ್ ಶಿಂಧೆ ಬಣ) ಹಾಗೂ ಎನ್‌ಸಿಪಿಗಳು (ಅಜಿತ್ ಪವಾರ್ ಬಣ) ಬೃಹತ್ ಗೆಲುವು ಸಾಧಿಸಿವೆ.– ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.