ADVERTISEMENT

‘ಸಾಮ್ನಾ’ ವಿರುದ್ಧ ‘ಪ್ರಹಾರ್‌'ನಲ್ಲಿ ತಿರುಗೇಟು ನೀಡುವುದಾಗಿ ರಾಣೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 19:45 IST
Last Updated 29 ಆಗಸ್ಟ್ 2021, 19:45 IST
ಉದ್ಧವ್ ಠಾಕ್ರೆ ಮತ್ತು ನಾರಾಯಣ ರಾಣೆ
ಉದ್ಧವ್ ಠಾಕ್ರೆ ಮತ್ತು ನಾರಾಯಣ ರಾಣೆ   

ಮುಂಬೈ: ‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಬಾರಿಸುತ್ತಿದ್ದೆ’ ಎಂದಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ವಿರುದ್ಧ ಶಿವಸೇನಾವು ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ವಾಗ್ದಾಳಿ ಮುಂದುವರಿಸಿದೆ. ಸಾಮ್ನಾ ವಾಗ್ದಾಳಿಯ ವಿರುದ್ಧ ತಮ್ಮ ಕುಟುಂಬದ ಒಡೆತನದ ಪತ್ರಿಕೆ ‘ಪ್ರಹಾರ್‌'ನಲ್ಲಿ ತಿರುಗೇಟು ನೀಡುವುದಾಗಿ ರಾಣೆ ಅವರು ಎಚ್ಚರಿಕೆ ನೀಡಿದ್ದಾರೆ.

ಸಾಮ್ನಾದ ಸಾಪ್ತಾಹಿಕ ಅಂಕಣ ‘ರೋಖ್‌ತೋಕ್‌’ನಲ್ಲಿ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವುತ್ ಅವರು, ರಾಣೆ ಅವರ ಇಬ್ಬರು ಮಕ್ಕಳಾದ ನಿಲೇಶ್ ರಾಣೆ ಮತ್ತು ನಿತೇಶ್ ರಾಣೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಠಾಕ್ರೆ ವಿರುದ್ಧದ ವಾಗ್ದಾಳಿಯನ್ನು ಖಂಡಿಸಿದ್ದರು. ಬಿಜೆಪಿಯು ರಾಣೆಯನ್ನು ರಕ್ಷಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದರು.

‘ಮಹಾರಾಷ್ಟ್ರ ಬಿಜೆಪಿ ನಾಯಕರಾದ ದೇವೇಂದ್ರ ಫಡಣವೀಸ್ ಮತ್ತು ಚಂದ್ರಕಾಂತ್ ಪಾಟೀಲ್‌ ಹಾಗೂ ಜೆ.ಪಿ. ನಡ್ಡಾರಂತಹ ಬಿಜೆಪಿ ನಾಯಕರು ರಾಣೆಗೆ ಕರೆ ಮಾಡಿ ತಮ್ಮ ಬೆಂಬಲ ಸೂಚಿಸಿದ್ದಾರೆ. ರಾಣೆಯ ಮಕ್ಕಳು ಅವರ ಹೆಸರಿಗೆ ಕಪ್ಪು ಮಸಿ ಬಳಿಯುತ್ತಿದ್ದಾರೆ. ರಾಣೆ ಅವರ ಹೇಳಿಕೆಯು ಮಹಾರಾಷ್ಟ್ರದ ಘನತೆ ಮೇಲಿನ ದಾಳಿ ಎಂಬುದು ನಿಜವಾದರೆ, ದೆಹಲಿ ನಾಯಕರು ರಾಣೆ ಅವರ ಬೆಂಬಲಕ್ಕೆ ನಿಲ್ಲುವುದು ಏಕೆ’ ಎಂದ ರಾವುತ್ ಕೇಳಿದ್ದಾರೆ.

ADVERTISEMENT

ಸಾಮ್ನಾದಲ್ಲಿನ ಈ ವಾಗ್ದಾಳಿಗೆ ರಾಣೆ ಅವರು ಸಿಂಧುದುರ್ಗ ಜಿಲ್ಲೆಯಲ್ಲಿನ ಜನ ಆಶೀರ್ವಾದ ಯಾತ್ರೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಇದು ಮುಂದುವರಿದರೆ, ನಾನು ನನ್ನ ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆಯುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.