ADVERTISEMENT

ಕೋಟಿಗೂ ಅಧಿಕ ಡೋಸ್‌ ಕೋವಿಡ್‌ ಲಸಿಕೆ ನೀಡಿದ ಮೊದಲ ರಾಜ್ಯ ಮಹಾರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 15:44 IST
Last Updated 11 ಏಪ್ರಿಲ್ 2021, 15:44 IST
ಮುಂಬೈಯಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್ ಲಸಿಕೆ ನೀಡಲಾಯಿತು – ಪಿಟಿಐ ಚಿತ್ರ
ಮುಂಬೈಯಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್ ಲಸಿಕೆ ನೀಡಲಾಯಿತು – ಪಿಟಿಐ ಚಿತ್ರ   

ಮುಂಬೈ: ಲಸಿಕೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ವಾಗ್ವಾದ ನಡೆಯುತ್ತಿರುವ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಒಂದು ಕೋಟಿಗೂ ಹೆಚ್ಚು ಡೋಸ್‌ ಲಸಿಕೆಗಳನ್ನು ನೀಡಲಾಗಿದೆ.

ಇದರೊಂದಿಗೆ, ಒಂದು ಕೋಟಿಗೂ ಹೆಚ್ಚು ಡೋಸ್‌ ಲಸಿಕೆಗಳನ್ನು ನೀಡಿದ ಮೊದಲ ರಾಜ್ಯವೆಂಬ ಹಿರಿಮೆಗೂ ಮಹಾರಾಷ್ಟ್ರ ಪಾತ್ರವಾಗಿದೆ.

‘ಇಂದು (ಭಾನುವಾರ) ಮಧ್ಯಾಹ್ನದ ವೇಳೆಗೆ ನಾವು ಲಸಿಕೆ ನೀಡಿಕೆಯಲ್ಲಿ ಒಂದು ಕೋಟಿ ಡೋಸ್ ದಾಟಿದ್ದೇವೆ’ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಪ್ರದೀಪ್ ವ್ಯಾಸ್ ಹೇಳಿದ್ದಾರೆ.

ADVERTISEMENT

1 ಕೋಟಿ ಡೋಸ್ ಪೈಕಿ 90 ಲಕ್ಷ ಮಂದಿಗೆ ಮೊದಲ ಡೋಸ್ ನೀಡಲಾಗಿದೆ. 10 ಲಕ್ಷ ಮಂದಿಗೆ 2ನೇ ಡೋಸ್ ಸಹ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್‌ ತಡೆ ಲಸಿಕೆ ಮತ್ತು ಕೋವಿಡ್‌ ಔಷಧ ರೆಮ್‌ಡಿಸಿವಿರ್‌ ಕೊರತೆ ತೀವ್ರವಾಗಿದೆ ಎಂದು ಎರಡಿ ದಿನಗಳ ಹಿಂದೆ ವರದಿಯಾಗಿತ್ತು. ಮುಂಬೈನ ಹಲವು ಲಸಿಕೆ ಕೇಂದ್ರಗಳಲ್ಲಿ ಲಸಿಕೆಗಳು ಮುಗಿಯುತ್ತಾ ಬಂದಿವೆ. ಮುಂಬೈನ ಲೋಕಮಾನ್ಯ ತಿಲಕ್‌ ಜನರಲ್‌ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸುವಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹೇಳಿತ್ತು. ಆದರೆ, ವರದಿಗಳನ್ನು ಕೇಂದ್ರ ಸರ್ಕಾರವು ಅಲ್ಲಗಳೆದಿತ್ತು. ಮಹಾರಾಷ್ಟ್ರದಲ್ಲಿ ಲಸಿಕೆ ಕೊರತೆ ಇದೆ ಎಂಬುದು ಸಂಪೂರ್ಣ ನಿರಾಧಾರ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.