ಮುಂಬೈ: ಮಹಾರಾಷ್ಟ್ರದಲ್ಲಿ 1ರಿಂದ 5ನೇ ತರಗತಿವರೆಗೆ ಶಾಲೆಗಳಲ್ಲಿ ಮರಾಠಿ ಹಾಗೂ ಇಂಗ್ಲಿಷ್ ಭಾಷೆಯ ಜತೆಯಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.
ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ 25–26ನೇ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸಿದೆ. ಸರ್ಕಾರದ ಈ ನಡೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಹಾಗೂ ಕಾಂಗ್ರೆಸ್ ಕಟುವಾಗಿ ಟೀಕಿಸಿವೆ.
‘ಮೂರನೇ ಭಾಷೆಯಾಗಿ 1–5ನೇ ತರಗತಿವರೆಗೆ ಹಿಂದಿ ಭಾಷೆ ಕಲಿಕೆಯು ಕಡ್ಡಾಯ. 25–26ನೇ ಸಾಲಿನಿಂದ 1ರಿಂದ ತರಗತಿಗೆ ಅನ್ವಯವಾಗುವಂತೆ ಎನ್‌ಇಪಿ ಅನ್ನು ಜಾರಿಗೊಳಿಸಲಾಗಿದೆ’ ಎಂದು ಗುರುವಾರ ಹೊರಡಿಸಲಾದ ಸರ್ಕಾರದ ಅದೇಶ ತಿಳಿಸಿದೆ.
2, 3, 4 ಮತ್ತು 6ನೇ ತರಗತಿಗಳಿಗೆ 26–27ನೇ ಸಾಲಿನಿಂದ; 5, 9 ಮತ್ತು 11ನೇ ತರಗತಿಗಳಿಗೆ 2027–28ನೇ ಸಾಲಿನಿಂದ, 8, 10 ಮತ್ತು 12ನೇ ತರಗತಿಗಳಿಗೆ 28–29ನೇ ಸಾಲಿನಿಂದ ಎನ್‌ಇಪಿ ಜಾರಿಗೊಳಿಸಲಾಗುವುದು ಎಂದು ಆದೇಶ ವಿವರಿಸಿದೆ.
ರಾಜ್ ಠಾಕ್ರೆ ಪ್ರತಿಕ್ರಿಯಿಸಿ, ‘ಹಿಂದಿ ರಾಷ್ಟ್ರಭಾಷೆಯಲ್ಲ. ಇತರ ಭಾಷೆಗಳಂತೆಯೇ ಅದೂ ಒಂದು ರಾಜ್ಯ ಭಾಷೆ. ಮಹಾರಾಷ್ಟ್ರದಲ್ಲಿ ಅದನ್ನೇಕೆ ಕಲಿಸಬೇಕು’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
‘ತ್ರಿಭಾಷಾ ಸೂತ್ರವನ್ನು ಸರ್ಕಾರದ ಮಟ್ಟಕ್ಕಷ್ಟೇ ಸೀಮಿತಗೊಳಿಸಬೇಕು. ಅದನ್ನು ಶಿಕ್ಷಣಕ್ಕೆ ತರಬಾರದು. ನಾವು ಹಿಂದೂಗಳೇ ಹೊರತು, ಹಿಂದಿಗಳಲ್ಲ. ಮಹಾರಾಷ್ಟ್ರದಲ್ಲಿ ಹಿಂದಿ ಬಣ್ಣ ಬಳಿಯಲು ಯತ್ನಿಸಿದರೆ, ಹೋರಾಟ ನಿಶ್ಚಿತ’ ಎಂದಿದ್ದಾರೆ.
ಮೂರನೇ ಭಾಷೆಯಾಗಿ ಹಿಂದಿಯನ್ನು ಅಳವಡಿಸಿರುವ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್, ‘ನೂತನ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತಂದು, ಮರಾಠಿ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ’ ಎಂದಿದ್ದಾರೆ.
ಕಾಂಗ್ರೆಸ್ ಮುಖಂಡ ವಿಜಯ್ ವಡೆತ್ತಿವಾರ್ ಪ್ರತಿಕ್ರಿಯಿಸಿ, ‘ಇದು ಮರಾಠಿ ಅಸ್ಮಿತೆಯ ಪ್ರಶ್ನೆ. ಹಿಂದಿ ಐಚ್ಛಿಕ ವಿಷಯವಾದರೆ ತೊಂದರೆ ಇಲ್ಲ. ಆದರೆ ಕಡ್ಡಾಯಗೊಳಿಸಿದರೆ ಮರಾಠಿ ಭಾವನೆಗೆ ಧಕ್ಕೆ ತಂದಂತೆ. ಹೀಗಾದಲ್ಲಿ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶಗಳಲ್ಲಿ ತೃತೀಯ ಭಾಷೆಯಾಗಿ ಮರಾಠಿಯನ್ನು ಕಲಿಸಬೇಕು ಎಂದು ಆಗ್ರಹಿಸಲಾಗುವುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.