ADVERTISEMENT

ಮಹಾರಾಷ್ಟ್ರ: ಫಡಣವೀಸ್‌, ರಾಜ್‌ ಠಾಕ್ರೆ ಭದ್ರತೆ ಕಡಿತ

ಪಿಟಿಐ
Published 10 ಜನವರಿ 2021, 15:50 IST
Last Updated 10 ಜನವರಿ 2021, 15:50 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಮುಂಬೈ: ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಮತ್ತು ಅವರ ಕುಟುಂಬ, ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಹಾಗೂ ಈ ಹಿಂದೆ ಉತ್ತರ ಪ್ರದೇಶ ರಾಜ್ಯಪಾಲರಾಗಿದ್ದ ರಾಮ್‌ ನಾಯಕ್‌ ಅವರಿಗೆ ನೀಡಿದ್ದ ಪೊಲೀಸ್‌ ಭದ್ರತೆಯನ್ನು ಕಡಿತಗೊಳಿಸಿದೆ.

ಮಹಾರಾಷ್ಟ್ರ ಬಿಜೆಪಿಯ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ. ಈ ಸಂಬಂಧ ಸರ್ಕಾರವು ಇದೇ 8ರಂದು ಆದೇಶ ಹೊರಡಿಸಿದೆ.

ಫಡಣವೀಸ್‌ಗೆ ಈಗ ಬೆಂಗಾವಲು ಪಡೆಯನ್ನೊಳಗೊಂಡ ‘ವೈ–ಪ್ಲಸ್‌’ ಭದ್ರತೆ ಒದಗಿಸಲಾಗಿದೆ. ಈ ಮೊದಲು ಅವರಿಗೆ ‘ಜೆಡ್‌–ಪ್ಲಸ್‌’ ಭದ್ರತೆ ನೀಡಲಾಗಿತ್ತು. ಪತ್ನಿ ಅಮೃತ ಹಾಗೂ ಮಗಳು ದಿವಿಜಾ ಅವರ ಭದ್ರತೆಯನ್ನು ‘ವೈ–ಪ್ಲಸ್‌’ನಿಂದ ‘ಎಕ್ಸ್‌’ ಕೆಟಗರಿಗೆ ತಗ್ಗಿಸಲಾಗಿದೆ.

ADVERTISEMENT

ರಾಮ್‌ ನಾಯಕ್‌ ಅವರಿಗೆ ‘ವೈ–ಪ್ಲಸ್‌’ ಬದಲಾಗಿ ‘ವೈ’ ಭದ್ರತೆ ಒದಗಿಸಲಾಗಿದೆ. ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಅವರ ಭದ್ರತೆಯನ್ನು ‘ವೈ–ಪ್ಲಸ್‌’ಗೆ ಇಳಿಸಲಾಗಿದೆ. ಅವರಿಗೆ ಬೆಂಗಾವಲು ಪಡೆಯೂ ಇರಲಿದೆ. ಈ ಮೊದಲು ಠಾಕ್ರೆ ‘ಜೆಡ್‌’ ಭದ್ರತೆ ಹೊಂದಿದ್ದರು. ಕೇಂದ್ರ ಸಚಿವ ರಾಮದಾಸ್‌ ಅಠಾವಳೆ ಅವರ ಭದ್ರತೆಯನ್ನು ‘ವೈ–ಪ್ಲಸ್‌’ಗೆ ಇಳಿಸಲಾಗಿದೆ.

ಬಿಜೆಪಿ ಮುಖಂಡ ಹಾಗೂ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾರಾಯಣ ರಾಣೆ, ಕೇಂದ್ರ ಸಚಿವ ರಾವ್‌ ಸಾಹೇಬ್‌ ಧಾನ್ವೆ ಅವರಿಗೆ ನೀಡಿದ್ದ ಭದ್ರತೆಯನ್ನೂ ಸಂಪೂರ್ಣವಾಗಿ ಹಿಂಪಡೆಯಲಾಗಿದೆ.

ಕಾಂಗ್ರೆಸ್‌ ಮುಖಂಡ ಹಾಗೂ ಬಾಲಿವುಡ್‌ ನಟ ಶತ್ರುಘ್ನ ಸಿನ್ಹಾ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವರೀಗ ಬೆಂಗಾವಲು ಪಡೆಯನ್ನೊಳಗೊಂಡ ‘ವೈ–ಪ್ಲಸ್‌ ಭದ್ರತೆ ಪಡೆಯಲಿದ್ದಾರೆ. ಈ ಮೊದಲು ಅವರಿಗೆ ಕೇವಲ ‘ವೈ–ಪ್ಲಸ್‌’ ಭದ್ರತೆ ಇತ್ತು. ಹಿರಿಯ ವಕೀಲ ಉಜ್ವಲ್‌ ನಿಕಂ ಅವರ ಭದ್ರತೆಯನ್ನು ‘ಜೆಡ್‌’ಗೆ ಹೆಚ್ಚಿಸಲಾಗಿದೆ.

ಉಪ ಮುಖ್ಯಮಂತ್ರಿ ಸುನೇತ್ರ ಪವಾರ್‌ ಹಾಗೂ ಯುವ ಸೇನೆಯ ಕಾರ್ಯದರ್ಶಿ ವರುಣ್‌ ಸರ್ದೇಸಾಯಿ ಸೇರಿದಂತೆ ಒಟ್ಟು 13 ಮಂದಿಗೆ ಹೊಸದಾಗಿ ಭದ್ರತೆ ಒದಗಿಸಲಾಗಿದೆ. ವರುಣ್‌ ಅವರು ಉದ್ಧವ್‌ ಠಾಕ್ರೆ ಪತ್ನಿ ರಶ್ಮಿ ಅವರ ಸಹೋದರ ಸಂಬಂಧಿ.

***
ನಾನು ರಾಜ್ಯದ ಜನರ ಆಸ್ತಿ. ಸರ್ಕಾರದ ಇಂತಹ ಕ್ರಮಗಳಿಂದ ಧೃತಿಗೆಡುವುದಿಲ್ಲ. ಮುಂದೆಯೂ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸುತ್ತೇನೆ.
-ದೇವೇಂದ್ರ ಫಡಣವೀಸ್‌, ವಿರೋಧ ಪಕ್ಷದ ನಾಯಕ.

***

ರಾಜಕೀಯ ನಾಯಕರು ಹಾಗೂ ಗಣ್ಯರ ಭದ್ರತೆಯ ಪರಿಶೀಲನೆಗೆ ರಚಿಸಲಾಗಿದ್ದ ಹಿರಿಯ ಅಧಿಕಾರಿಗಳ ತಂಡ ಈ ತೀರ್ಮಾನ ಕೈಗೊಂಡಿದೆ. ಇದರಲ್ಲಿ ರಾಜಕೀಯ ದುರುದ್ದೇಶವಿಲ್ಲ.
–ಅನಿಲ್‌ ದೇಶ್‌ಮುಖ್‌, ಗೃಹ ಸಚಿವ

**

ಉಗ್ರರಿಂದ ನನಗೆ ಬೆದರಿಕೆ ಇತ್ತು. ಹೀಗಾಗಿ ಭದ್ರತೆ ಒದಗಿಸಲಾಗಿತ್ತು. ಅದನ್ನು ಸರ್ಕಾರ ಹಿಂಪಡೆದಿದೆ. ನನ್ನ ಪ್ರಾಣಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ.
-ನಾರಾಯಣ ರಾಣೆ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.