ಪ್ರಾತಿನಿಧಿಕ ಚಿತ್ರ
ಮುಂಬೈ: ಮಹಾರಾಷ್ಟ್ರದ ಲಾತೂರ್‌ನಲ್ಲಿ ಭಾರಿ ಮಳೆಯಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಐವರ ಮೃತದೇಹಗಳನ್ನು 40 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಯಿತು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಹೊಲದಿಂದ ಹಿಂತಿರುಗುತ್ತಿದ್ದಾಗ 27 ವರ್ಷದ ಸುದರ್ಶನ್ ತಿರ್ರು ನದಿಯಲ್ಲಿ ಕೊಚ್ಚಿ ಹೋಗಿದ್ದರು. ಜಲ್ಕೋಟ್ ತಾಲ್ಲೂಕಿನ ಸೇತುವೆಯೊಂದರ ಮೇಲೆ ಆಟೊರಿಕ್ಷಾದಲ್ಲಿ ಪ್ರಮಾಣಿಸುವ ವೇಳೆ ಪ್ರಬಲ ಪ್ರವಾಹದಿಂದ ಐವರು ಕೊಚ್ಚಿ ಹೋಗಿದ್ದರು, ಈ ಪೈಕಿ ಮೂವರನ್ನು ರಕ್ಷಿಸಲಾಗಿತ್ತು. ನಾಪತ್ತೆಯಾಗಿದ್ದ ಆಟೋರಿಕ್ಷಾ ಚಾಲಕ ಸಂಗ್ರಾಮ್ ಸೋನ್‌ಕಾಂಬ್ಲೆ ಹಾಗೂ ವಿಠ್ಠಲ್ ಗವಳಿ ಅವರ ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಉದ್ಗೀರ್‌ನ ವೈಭವ್ ಪುಂಡಲೀಕ್ ಗಾಯಕ್ವಾಡ್ (24) ಮತ್ತು ಸಂಗೀತಾ ಮುರ್ಹರಿ ಸೂರ್ಯವ್ವಂಶಿ (32) ಅವರ ಮೃತದೇಹಗಳು ಡೊಂಗರ್ಗಾಂವ್ ನದಿಯಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಲಾತೂರ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು, ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ನಡುವೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಅಗ್ನಿಶಾಮಕ ದಳ ಮತ್ತು ಪೊಲೀಸರ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಾರಿ ಮಳೆಯಿಂದಾಗಿ ಬೆಳೆಗಳು ನಾಶವಾಗಿದ್ದು ಹಾಗೂ ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ₹480 ಕೋಟಿ ನಷ್ಟವಾಗಿದೆ. ಆದರೆ ಸಮೀಕ್ಷೆ ಮೂಲಕವೇ ನಿಖರವಾದ ಅಂಕಿ ಅಂಶ ಸಿಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.