ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ಬಗ್ಗೆ ಚರ್ಚೆ: ಶರದ್ ಪವಾರ್

ಪಿಟಿಐ
Published 20 ಜೂನ್ 2025, 10:36 IST
Last Updated 20 ಜೂನ್ 2025, 10:36 IST
ಶರದ್ ಪವಾರ್
ಶರದ್ ಪವಾರ್   

ಪುಣೆ: ಮಹಾರಾಷ್ಟ್ರದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ಬಗ್ಗೆ ಮಹಾ ವಿಕಾಸ ಅಘಾಡಿ (ಎಂವಿಎ)ಯ ಮೈತ್ರಿ ಪಕ್ಷಗಳು ಚರ್ಚೆ ನಡೆಸಲಿವೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ.

ಬಾರಾಮತಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಮುನ್ಸಿಪಲ್ ಚುನಾವಣೆಗಳನ್ನು ನಡೆಸಲು ಸುಪ್ರೀಂಕೋರ್ಟ್ ನಿರ್ದೇಶಿಸಿರುವುದರಿಂದ, ನಾವು ಒಟ್ಟಾಗಿ ಸ್ಪರ್ಧಿಸುವ ಬಗ್ಗೆ ಶೀಘ್ರದಲ್ಲೇ ಚರ್ಚೆ ನಡೆಸಲಿದ್ದೇವೆ ಎಂದು ಅವರು ಹೇಳಿದರು.

ಈ ಕುರಿತಂತೆ ನಾವು ಇನ್ನೂ ಕಾಂಗ್ರೆಸ್‌ನೊಂದಿಗೆ ಚರ್ಚೆ ನಡೆಸಿಲ್ಲವಾದರೂ, ನಮ್ಮ ಪಕ್ಷ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಮತ್ತು ಇತರ ಪಕ್ಷಗಳ ಜೊತೆ ಒಟ್ಟಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದರು. ಕಾಂಗ್ರೆಸ್‌ ಸೇರಿದಂತೆ ಎಂವಿಎ ಚುನಾವಣೆಗಳಲ್ಲಿ ಒಟ್ಟಾಗಿ ಹೋರಾಡಲು ಬಯಸಿರುವುದರಿಂದ ಅಂತಿಮ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಾಗುವುದು ಎಂದರು.

ADVERTISEMENT

ಮುಂಬೈನ ಪಾಲಿಕೆ ಚುನಾವಣೆಯಲ್ಲಿ ಎಂವಿಎ ಸ್ಪರ್ಧಿಸುತ್ತದೆಯೇ ಎಂದು ಸುದ್ದಿಗಾರರು ಕೇಳಿದಾಗ, ಅಂತಹ ಯಾವುದೇ ಚರ್ಚೆ ಇಲ್ಲಿಯವರೆಗೆ ನಡೆದಿಲ್ಲ ಎಂದು ಪವಾರ್ ಹೇಳಿದರು.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮುಂಬೈನಲ್ಲಿ ಬಲವಾದ ನೆಲೆಯನ್ನು ಹೊಂದಿದೆ, ಅವರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ನಿರ್ಧಾರ ಮಾಡಲಾಗುವುದು ಎಂದರು.

ಮಹಾರಾಷ್ಟ್ರದಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯ ಮಾಡಬಾರದು ಎಂದ ಅವರು, ಹಿಂದಿ ಐಚ್ಛಿಕವಾಗಿರಬೇಕು. ಹಿಂದಿಯನ್ನು ಆಯ್ಕೆ ಮಾಡಲು ಬಯಸುವವರು ಆಯ್ಕೆ ಮಾಡಿಕೊಳ್ಳಬಹುದು ಎಂದರು. 

ನಮ್ಮಲ್ಲಿ ಶೇ 50 ರಿಂದ 60ರಷ್ಟು ಜನರು ಹಿಂದಿ ಮಾತನಾಡುತ್ತಾರೆ, ಸಂವಹನಕ್ಕೆ ಹಿಂದಿ ಉತ್ತಮ ಭಾಷೆಯಾಗಿದೆ. ಆದ್ದರಿಂದ, ಆ ಭಾಷೆಯನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ, ಹಾಗೇ ಅದನ್ನು ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಹೇಳಿದರು.

ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಎಂವಿಎ 288 ಸ್ಥಾನಗಳಲ್ಲಿ ಕೇವಲ 46 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.