
ಮುಂಬೈ: ಮಹಾರಾಷ್ಟ್ರದ ನಗರ ಸಭೆ ಮತ್ತು ನಗರ ಪಂಚಾಯಿತಿ ಚುನಾವಣೆಗಳಲ್ಲಿ ಪರಾಭವಗೊಂಡಿರುವುದನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಶಿವಸೇನಾ (ಉದ್ಧವ್ ಬಣ) ಒಪ್ಪಿಕೊಂಡಿವೆ. ಚುನಾವಣಾ ಆಯೋಗವು ಆಡಳಿತಾರೂಢ ‘ಮಹಾಯುತಿ’ಯನ್ನು ಗೆಲ್ಲಿಸಿದೆ ಎಂದು ಅವು ಆರೋಪಿಸಿವೆ.
286 ನಗರ ಸಭೆಗಳು ಮತ್ತು ನಗರ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಭಾನುವಾರ ನಡೆಯಿತು.
ರಾಜ್ಯ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪಕಾಲ್ ಅವರು, ‘ಮಹಾಯುತಿ ಮೈತ್ರಿಕೂಟವನ್ನು ಚುನಾವಣೆಯಲ್ಲಿ ಗೆಲ್ಲಿಸಲು ನೆರವಾದ ಆಯೋಗಕ್ಕೆ ಅಭಿನಂದನೆಗಳು’ ಎಂದು ಹೇಳಿದರು.
ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವುತ್ ಅವರು, ‘ಸ್ಥಳೀಯ ಚುನಾವಣೆಗೆ ಆಡಳಿತ ಪಕ್ಷದಿಂದ ಹಣದ ಹೊಳೆಯೇ ಹರಿದಿದ್ದು, ಅದರ ಮುಂದೆ ವಿಪಕ್ಷಗಳಿಗೆ ನಿಲ್ಲಲಾಗಲಿಲ್ಲ’ ಎಂದರು.
‘ಕಳೆದ ವಿಧಾನಸಭೆ ಚುನಾವಣೆ ಮತ್ತು ಈ ಚುನಾವಣೆಗೆ ಬಳಸಿದ ಇವಿಎಂ ಎರಡೂ ಒಂದೇ. ಮಹಾಯುತಿಯು ನಗರಸಭೆ ಚುನಾವಣೆಗೆ ₹150 ಕೋಟಿ ಖರ್ಚು ಮಾಡಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.