ADVERTISEMENT

ಪಕ್ಷಪಾತದ ಬಜೆಟ್: ಆದಿತ್ಯ ಠಾಕ್ರೆ ಕಿಡಿ

ಶಿವಸೇನಾ ನಾಯಕ ಆದಿತ್ಯ ಟೀಕೆಗೆ ಡಿಸಿಎಂ ಫಡಣವೀಸ್ ತಿರುಗೇಟು

ಪಿಟಿಐ
Published 23 ಜುಲೈ 2024, 16:55 IST
Last Updated 23 ಜುಲೈ 2024, 16:55 IST
ಆದಿತ್ಯ ಠಾಕ್ರೆ
ಆದಿತ್ಯ ಠಾಕ್ರೆ   

ಮುಂಬೈ : ‘ಅತಿದೊಡ್ಡ ತೆರಿಗೆದಾರರಾಗಿದ್ದರೂ, ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಪಕ್ಷಪಾತ ಎಸಗಲಾಗಿದೆ’ ಎಂದು ಶಿವಸೇನಾ ನಾಯಕ (ಉದ್ಧವ್ ಬಣ) ಆದಿತ್ಯ ಠಾಕ್ರೆ ಮಂಗಳವಾರ ಕಿಡಿಕಾರಿದ್ದಾರೆ.

ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ ಮಂಡನೆಯ ವೇಳೆ ಒಮ್ಮೆಯೂ ಮಹಾರಾಷ್ಟ್ರದ ಹೆಸರು ಪ್ರಸ್ತಾಪಿಸಿಲ್ಲ ಎಂದಿದ್ದಾರೆ.

‘ಭ್ರಷ್ಟ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಮತ್ತು ತೆರಿಗೆಗಳಿಂದ ಮಹಾರಾಷ್ಟ್ರವನ್ನು ಲೂಟಿ ಮಾಡುತ್ತಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ಠಾಕ್ರೆ ಪೋಸ್ಟ್ ಮಾಡಿದ್ದಾರೆ.

ADVERTISEMENT

‘ಸರ್ಕಾರವನ್ನು ಉಳಿಸಿಕೊಳ್ಳಲಿಕ್ಕಾಗಿ ಬಿಜೆಪಿಯು ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್‌ನ ದೊಡ್ಡ ಮೊತ್ತವನ್ನು ನೀಡುತ್ತಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಮಹಾರಾಷ್ಟ್ರದ ತಪ್ಪೇನು? ನಾವು ಅತಿದೊಡ್ಡ ತೆರಿಗೆ ಪಾವತಿದಾರರಲ್ಲವೇ? ನಾವು ಕೊಟ್ಟ ಕೊಡುಗೆಗೆ ಸಿಕ್ಕಿದ್ದೇನು? ಬಿಜೆಪಿಯು ಮಹಾರಾಷ್ಟ್ರವನ್ನು ಏಕೆ ದ್ವೇಷಿಸುತ್ತಿದೆ ಮತ್ತು ಅವಮಾನಿಸುತ್ತಿದೆ? ಬಿಜೆಪಿ ಸರ್ಕಾರದ ಕಳೆದ ಒಂದು ದಶಕದ ಆಡಳಿತದಲ್ಲಿ ಮಹಾರಾಷ್ಟ್ರದ ವಿರುದ್ಧ ಇಂತಹ ಪಕ್ಷಪಾತವನ್ನು ನಾವು ನೋಡುತ್ತಿರುವುದು ಇದೇ ಮೊದಲಲ್ಲ’ ಎಂದು ಠಾಕ್ರೆ ಗುಡುಗಿದ್ದಾರೆ.

‘ವಿಪಕ್ಷಗಳಿಂದ ನಕಾರಾತ್ಮಕ ನಿರೂಪಣೆ’

‘ಕೇಂದ್ರ ಬಜೆಟ್‌ ಮಹಾರಾಷ್ಟ್ರಕ್ಕೆ ಗಣನೀಯ ಹಂಚಿಕೆಗಳನ್ನು ಮೀಸಲಾಗಿರಿಸಿದ್ದರೂ, ವಿರೋಧ ಪಕ್ಷಗಳು ನಕಾರಾತ್ಮಕ ನಿರೂಪಣೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿವೆ’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಂಗಳವಾರ ಇಲ್ಲಿ ದೂರಿದರು.

‘ಬಜೆಟ್‌ನಲ್ಲಿ ಮಹಾರಾಷ್ಟ್ರಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ. ಪ್ರತಿಪಕ್ಷಗಳು ಪ್ರತಿಕ್ರಿಯಿಸುವ ಮೊದಲು ಬಜೆಟ್‌ ಅನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಸೂಕ್ತವಾಗಿದೆ’ ಎಂದು ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮುಂಬೈನ ಸ್ಥಳೀಯ ರೈಲ್ವೆ ಜಾಲ ಬಲಪಡಿಸುವ ಎಂಯುಟಿಪಿ–3ರಡಿ ₹908 ಕೋಟಿ, ಮುಂಬೈ ಮೆಟ್ರೊಗೆ ₹1,087 ಕೋಟಿ, ಮುಂಬೈ–ದೆಹಲಿ ಕಾರಿಡಾರ್‌ಗೆ ₹499 ಕೋಟಿ, ಎಂಎಂಆರ್‌ ಗ್ರೀನ್ ಅರ್ಬನ್ ಟ್ರಾನ್ಸ್‌ಪೋರ್ಟ್‌ಗೆ ₹150 ಕೋಟಿ, ನಾಗ್ಪುರ ಮೆಟ್ರೊಗೆ ₹683 ಕೋಟಿ, ಪುಣೆ ಮೆಟ್ರೊಗೆ ₹814 ಕೋಟಿ, ಮುಲಾ–ಮುಥಾ ನದಿಗೆ ಸಂಬಂಧಿಸಿದ ಯೋಜನೆಗಳಿಗೆ ₹690 ಕೋಟಿ ಒದಗಿಸಲಾಗಿದೆ ಎಂದು ಫಡಣವೀಸ್‌ ಹೇಳಿದರು.

ಹಿಮಾಚಲಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದರೂ, ಬಜೆಟ್ ಮೂಲಕ ಆ ರಾಜ್ಯಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ ಎಂದರು.

ದೇವೇಂದ್ರ ಫಡಣವೀಸ್

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.