ADVERTISEMENT

ಮಹಾರಾಷ್ಟ್ರ | ರಾಹುಲ್ ಪೋಸ್ಟರ್‌ಗೆ ಬಿಜೆಪಿ–ಶಿವಸೇನಾ ಶಾಸಕರ ಚಪ್ಪಲಿ ಏಟು: ಖಂಡನೆ

ಪಿಟಿಐ
Published 23 ಮಾರ್ಚ್ 2023, 11:29 IST
Last Updated 23 ಮಾರ್ಚ್ 2023, 11:29 IST
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ   

ಮುಂಬೈ: ಹಿಂದುತ್ವವಾದಿ ವಿ.ಡಿ ಸಾವರ್ಕರ್‌ ವಿರುದ್ಧ ಹೇಳಿಕೆ ನೀಡಿದ ಆರೋಪ ಸಂಬಂಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಪೋಸ್ಟರ್‌ಗೆ ಬಿಜೆಪಿ–ಶಿವಸೇನಾ ಶಾಸಕರು ಚಪ್ಪಲಿಯಿಂದ ಹೊಡೆದಿದ್ದಾರೆ. ಇದರ ವಿರುದ್ಧ 'ಮಹಾ ವಿಕಾಸ್ ಆಘಾಡಿ' (ಶಿವಸೇನೆಯ ಉದ್ಧವ್‌ ಠಾಕ್ರೆ ಬಣ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಮೈತ್ರಿಕೂಟ) ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ–ಶಿವಸೇನಾ ಸದಸ್ಯರು ಮಹಾರಾಷ್ಟ್ರ ವಿಧಾನಭವನದ ಮೆಟ್ಟಿಲುಗಳ ಮೇಲೆ ರಾಹುಲ್‌ ಪೋಸ್ಟರ್‌ಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್‌ ಶಾಸಕ ಬಾಳಾಸಾಹೇಬ್‌ ಥೋರಟ್, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿಧಾನಸಭೆ ಸಭಾಪತಿ ರಾಹುಲ್‌ ನರ್ವೇಕರ್‌ ಅವರು ಶಾಸಕರ ನಡೆಯನ್ನು ಖಂಡಿಸಿದ್ದು, ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ADVERTISEMENT

ವಿಧಾನಭವನದ ಆವರಣದಲ್ಲಿ ಇಂತಹ ಘಟನೆ ನಡೆದಿರುವುದು ತಪ್ಪು ಎಂದಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌, ರಾಹುಲ್‌ ಗಾಂಧಿಯವರ ನಡೆಯನ್ನೂ ಟೀಕಿಸಿದ್ದಾರೆ. ಸಾವರ್ಕರ್‌ ಅವರು ಅಂಡಮಾನ್‌ ಜೈಲಿನಲ್ಲಿ 11 ವರ್ಷ ಕಳೆದಿದ್ದಾರೆ. ಅವರ ವಿರುದ್ಧ ರಾಹುಲ್‌ ಗಾಂಧಿ ಮಾತನಾಡಿರುವುದನ್ನು ಖಂಡಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಕಲಾಪ ಪುನರಾರಂಭವಾಗುತ್ತಿದ್ದಂತೆಯೇ ರಾಹುಲ್ ಹೇಳಿಕೆ ಉಲ್ಲೇಖಿಸಿ ಕಿಡಿಕಾರಿದ ಬಿಜೆಪಿ ಶಾಸಕ ಅತುಲ್‌ ಭಟ್ಖಲ್ಕರ್‌, 'ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ವ್ಯಕ್ತಿ, ಸ್ವಾತಂತ್ರ್ಯಹೋರಾಟಗಾರರನ್ನು ಅವಮಾನಿಸಿದ್ದಾರೆ' ಎಂದು ಟೀಕಿಸಿದ್ದಾರೆ.

ಬಳಿಕ ಮಾತನಾಡಿದ ಸಭಾಪತಿ ನರ್ವೇಕರ್‌, 'ಈ ಬಗ್ಗೆ ತನಿಖೆ ಕೈಗೊಳ್ಳಲಾಗುವುದು. ಎಲ್ಲವನ್ನೂ ದಾಖಲಿಸಿಕೊಳ್ಳಲಾಗುವುದು. ಮತ್ತೊಮ್ಮೆ ಇಂತಹ ಘಟನೆ ನಡೆಯಬಾರದು. ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ. ಆಡಳಿತಾರೂಢ ಶಾಸಕರ ನಡೆಯನ್ನು ಖಂಡಿಸಿದ ನರ್ವೇಕರ್‌, 'ನೀವು ಖಂಡಿಸಬೇಕೆಂದಿದ್ದರೆ, ಅದನ್ನು ಸೂಕ್ತ ರೀತಿಯಲ್ಲಿ ಮಾಡಿ. ಈ ಸಂಬಂಧ ನನಗೆ ಈವರೆಗೆ ಯಾವುದೇ ಸೂಚನಾ ಪತ್ರ ಬಂದಿಲ್ಲ' ಎಂದಿದ್ದಾರೆ.

'ಹಿಂದುತ್ವವಾದಿ ವಿ.ಡಿ.ಸಾವರ್ಕರ್‌ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಅಲ್ಲದೆ, ಕ್ಷಮಾದಾನ ಕೋರಿ ಪತ್ರವನ್ನೂ ಬರೆದಿದ್ದರು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದವಾರ ಹೇಳಿದ್ದರು. ಇದನ್ನು ಖಂಡಿಸಿ ಆಡಳಿತಾರೂಢ ಮೈತ್ರಿಕೂಟದ ಶಾಸಕರು ಇಂದು ಘೋಷಣೆಗಳನ್ನು ಕೂಗಿದ್ದರಿಂದ, ಗದ್ದಲ ಉಂಟಾಗಿ ಕಲಾಪವನ್ನು ಎರಡು ಬಾರಿ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.