ADVERTISEMENT

‘ಮಹಾ’ ಸರ್ಕಾರಕ್ಕೆ ಬಂಡಾಯದ ಬಿಸಿ: ಸೂರತ್‌ ಹೋಟೆಲ್‌ನಲ್ಲಿ ಶಿವಸೇನಾದ 25 ಶಾಸಕರು

ಐಎಎನ್ಎಸ್
Published 21 ಜೂನ್ 2022, 6:06 IST
Last Updated 21 ಜೂನ್ 2022, 6:06 IST
ಏಕನಾಥ್ ಶಿಂಧೆ
ಏಕನಾಥ್ ಶಿಂಧೆ   

ಸೂರತ್:ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಶಂಕೆಯ ಬೆನ್ನಲ್ಲೇ ಶಿವಸೇನಾ ನೇತೃತ್ವದ ‘ಮಹಾ ವಿಕಾಸ್ ಅಘಾಡಿ’ ಸರ್ಕಾರಕ್ಕೆ ಬಂಡಾಯದ ಬಿಸಿ ತಟ್ಟಿದೆ.

ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಶಿವಸೇನಾದ 25 ಶಾಸಕರು ಗುಜರಾತ್‌ನ ಸೂರತ್‌ನಲ್ಲಿರುವ ಹೋಟೆಲೊಂದರಲ್ಲಿ ಬೀಡುಬಿಟ್ಟಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಸೂರತ್‌ನ ‘ಲಿ ಮೆರಿಡಿಯನ್’ ಹೋಟೆಲ್‌ನ 11 ಕೊಠಡಿಗಳನ್ನು ಸೋಮವಾರ ರಾತ್ರಿ 9.30ರಿಂದ 10 ಗಂಟೆಯ ನಡುವೆ ಕಾಯ್ದಿರಿಸಲಾಗಿದ್ದು, 11 ಶಾಸಕರು ಹೋಟೆಲ್ ತಲುಪಿದ್ದರು. ಮಹಾರಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ 14 ಶಾಸಕರ ತಂಡ ತಡರಾತ್ರಿ 1.30ರ ವೇಳೆಗೆ ಹೋಟೆಲ್ ತಲುಪಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಮೂಲಗಳ ಪ್ರಕಾರ, ಮುಂಬೈ ಹಾಗೂ ಗುಜರಾತ್ ಬಿಜೆಪಿ ನಾಯಕರು ಹೋಟೆಲ್‌ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಲು ಸೂಚಿಸಿದ್ದರು. ಶಿವಸೇನಾ ಶಾಸಕರು ಹೋಟೆಲ್‌ಗೆ ತಲುಪಿದ ಬಳಿಕ ಅವರಿಗೆ ಭದ್ರತೆ ಒದಗಿಸುವಂತೆ ಸೂರತ್ ಪೊಲೀಸರಿಗೆ ಸೂಚಿಸಲಾಗಿತ್ತು. ಹೋಟೆಲ್ ಸುತ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಮಂಗಳವಾರ ಬೆಳಿಗ್ಗೆವರೆಗೆ ಸೂರತ್‌ನಲ್ಲಿಯೇ ಇದ್ದರು. ಏಕನಾಥ್ ಶಿಂಧೆ ಹಾಗೂ ಪಾಟೀಲ್ ನಡುವಣ ಮಾತುಕತೆಯನ್ನು ಅವರ ಆಪ್ತರು ನಿರಾಕರಿಸಿದ್ದಾರೆ. ಆದರೂ ಉಭಯ ನಾಯಕರು ಮಾತುಕತೆ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ಹೇಳಿವೆ.

ಗಾಂಧಿನಗರದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಡೆದ ಯೋಗ ಕಾರ್ಯಕ್ರಮದಲ್ಲಿಯೂ ಪಾಟೀಲ್ ಭಾಗವಹಿಸಿಲ್ಲ.

ಮಹಾರಾಷ್ಟ್ರ ವಿಧಾನಪರಿಷತ್‌ಗೆ ಸೋಮವಾರ ನಡೆದ ಚುನಾವಣೆಯಲ್ಲಿ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಾಂತ್ ಹಂಡೊರೆಗೆ ಸೋಲಾಗಿತ್ತು. ಆಡಳಿತಾರೂಢ ಮೈತ್ರಿಕೂಟ 6 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಐವರು ಮಾತ್ರ ಜಯಗಳಿಸಿದ್ದರು. ಹೀಗಾಗಿ ಅಡ್ಡಮತದಾನವಾಗಿರುವ ಶಂಕೆ ವ್ಯಕ್ತವಾಗಿತ್ತು. ಬಿಜೆಪಿಯ ಎಲ್ಲ ಐವರು ಅಭ್ಯರ್ಥಿಗಳು ಜಯಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.