ADVERTISEMENT

ಮಹಾರಾಷ್ಟ್ರ ರಾಜಕೀಯ | ತಪ್ಪು ಮೈತ್ರಿ ಮಾಡಿದ್ದಕ್ಕೆ ಬೇಸರವಿದೆ: ಉದ್ಧವ್ ಠಾಕ್ರೆ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಬಗ್ಗೆ ಬೇಸರ * ಸುಳ್ಳುಗಾರ ಎಂದು ಕರೆಸಿಕೊಳ್ಳುವುದು ಬೇಕಿಲ್ಲ ಎಂದ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 14:19 IST
Last Updated 8 ನವೆಂಬರ್ 2019, 14:19 IST
ಉದ್ಧವ್ ಠಾಕ್ರೆ (ಎಎನ್‌ಐ ಚಿತ್ರ)
ಉದ್ಧವ್ ಠಾಕ್ರೆ (ಎಎನ್‌ಐ ಚಿತ್ರ)   

ಮುಂಬೈ:ತಪ್ಪು ಮೈತ್ರಿ ಮಾಡಿಕೊಂಡಿದ್ದಕ್ಕೆ ಬೇಸರವಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಬೇಸರ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿ ಮಿತ್ರಪಕ್ಷ ಬಿಜೆಪಿ ಜತೆಗಿನ ಹಗ್ಗಜಗ್ಗಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಶಿವಸೇನಾ ಶಾಸಕನನ್ನೇ ಮುಖ್ಯಮಂತ್ರಿ ಮಾಡುವುದಾಗಿ ನಾನು ಜನರಿಗೆ ಮಾತು ಕೊಟ್ಟಿದ್ದೆ. ಬಿಜೆಪಿ ಮತ್ತು ಶಿವಸೇನಾ 25 ವರ್ಷಗಳಿಂದ ಜತೆಯಾಗಿವೆ. ಅಧಿಕಾರದಲ್ಲಿ ಸಮಾನ ಪಾಲು ನಿರೀಕ್ಷಿಸುತ್ತಿರುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿಯೂ ಹೇಳಿದ್ದೆ’ ಎಂದರು.

‘ನಾನು ದೆಹಲಿಗೆ ಹೋಗಿಲ್ಲ. ಅಮಿತ್ ಶಾ ಅವರೇ ಇಲ್ಲಿಗೆ ಬಂದಿದ್ದರು. ನನ್ನಿಂದಾಗಿ ಮಾತುಕತೆ ವಿಳಂಬವಾಗಿದ್ದು ನಿಜ. ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಡುವಷ್ಟು ಶಿವಸೇನಾ ಹತಾಶವಾಗಿಲ್ಲ ಎಂದು ನಾನು ಅವರಿಗೆ ತಿಳಿಸಿದ್ದೆ. ಆಗ, ನನ್ನ ಮನಸ್ಸಿನಲ್ಲಿ ಏನಿದೆ ಎಂದು ಶಾ ಅವರು ನನ್ನ ಬಳಿ ಕೇಳಿದರು’ ಎಂದು ಠಾಕ್ರೆ ಹೇಳಿದ್ದಾರೆ.

‘ದೇವೇಂದ್ರ ಫಡಣವೀಸ್ ನನ್ನ ಉತ್ತಮ ಸ್ನೇಹಿತ ಎಂದು ನಾನು ತಮಾಷೆಗೆ ಹೇಳುತ್ತಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನವರನ್ನು ಬೆಂಬಲಿಸಿದೆ. ಈಗ ಏನಾಯಿತೆಂದು ನನಗೆ ತಿಳಿದಿಲ್ಲ. ಆದರೆ ಅವರಿಂದ ನಾನಿದನ್ನು ನಿರೀಕ್ಷಿಸಿರಲಿಲ್ಲ’ ಎಂದು ಠಾಕ್ರೆ ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಮಹಾರಾಷ್ಟ್ರದ ಅಭಿವೃದ್ಧಿಗೆ ಎಲ್ಲಿಯೂ ರಾಜಕೀಯ ಅಡ್ಡಿಯಾಗಲು ನಾವು ಬಿಡಲಿಲ್ಲ. ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಶಿವಸೇನಾ ಈಡೇರಿಸಿದೆ ಎಂದು ಅವರು ಹೇಳಿದರು.

‘ಸುಳ್ಳುಗಾರ ಎಂದು ಕರೆಯುವುದು ಬೇಕಿಲ್ಲ’

ಅಧಿಕಾರ ಹಂಚಿಕೆ ಕುರಿತಾಗಿ ಶಿವಸೇನಾಗೆ ಮಾತು ಕೊಟ್ಟಿರಲಿಲ್ಲ ಎಂಬ ದೇವೇಂದ್ರ ಫಡಣವೀಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಠಾಕ್ರೆ, ತಮ್ಮನ್ನು ಸುಳ್ಳುಗಾರ ಎಂದು ಕರೆಸಿಕೊಳ್ಳುವುದು ಬೇಕಾಗಿಲ್ಲ ಎಂದರು.

ಬಿಜೆಪಿಯು ನಮ್ಮನ್ನು ಸುಳ್ಳುಗಾರರು ಎಂದು ಬಿಂಬಿಸಲು ಯತ್ನಿಸುತ್ತಿದೆ. ಆದರೆ, ಸಮಾನ ಅಧಿಕಾರ ಹಂಚಿಕೆ ಬಗ್ಗೆ ಅಮಿತ್ ಶಾ ಮಾತು ನೀಡಿದ್ದು ನಿಜ ಎಂದು ಅವರು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.