ADVERTISEMENT

ಮಹಾರಾಷ್ಟ್ರ| ‘ಮತಾಂತರ ವಿರೋಧಿ ಕಾಯ್ದೆ ಶೀಘ್ರ’: ಗೃಹ ಖಾತೆ ರಾಜ್ಯ ಸಚಿವ ಭೋಯಾರ್

ಪಿಟಿಐ
Published 15 ಜುಲೈ 2025, 13:05 IST
Last Updated 15 ಜುಲೈ 2025, 13:05 IST
-
-   

ಮುಂಬೈ: ‘ರಾಜ್ಯದಲ್ಲಿ ಧಾರ್ಮಿಕ ಮತಾಂತರ ವಿರೋಧಿ ಕಾಯ್ದೆಯನ್ನು ಶೀಘ್ರವೇ ರೂಪಿಸಲಾಗುವುದು. ಈ ಕುರಿತ ಮಸೂದೆಯನ್ನು ಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ, ಅಂಗೀಕರಿಸಲಾಗುವುದು’ ಎಂದು ಮಹಾರಾಷ್ಟ್ರದ ಗೃಹ ಖಾತೆ ರಾಜ್ಯ ಸಚಿವ ಪಂಕಜ್‌ ಭೋಯರ್‌ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸೋಮವಾರ ಮಾತನಾಡಿದ ಅವರು, ‘ಉದ್ದೇಶಿತ ಕಾಯ್ದೆಯು ಇತರ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕಾಯ್ದೆಗಳಿಗಿಂತಲೂ ಕಠಿಣವಾಗಿರಲಿದೆ. ಮಹಾರಾಷ್ಟ್ರವು ಇಂತಹ ಕಾಯ್ದೆಯನ್ನು ಜಾರಿಗೆ ತರಲಿರುವ 11ನೇ ರಾಜ್ಯವಾಗಲಿದೆ’ ಎಂದಿದ್ದಾರೆ.

‘ಮತಾಂತರ ವಿರೋಧಿ ಕಾಯ್ದೆ ರೂಪಿಸುವ ಸಂಬಂಧ ಡಿಜಿಪಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯು ಕರಡು ಮಸೂದೆಯನ್ನು ಈಗಾಗಲೇ ಸಲ್ಲಿಸಿದೆ. ಬರುವ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಲಾಗುವುದು’ ಎಂದು ಅವರು ಸದನಕ್ಕೆ ತಿಳಿಸಿದ್ದಾರೆ.

ADVERTISEMENT

ಮಹಾರಾಷ್ಟ್ರದ ಎರಡನೇ ರಾಜಧಾನಿಯಾದ ನಾಗ್ಪುರದಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಆಯೋಜಿಸಲಾಗುತ್ತದೆ.

ಇದಕ್ಕೂ ಮುನ್ನ, ರಾಜ್ಯದಲ್ಲಿ ನಡೆಯುತ್ತಿರುವ ಬಲವಂತದ ಮತಾಂತರ ಕುರಿತು ಶಿವಸೇನಾದ ವಿಧಾನ ಪರಿಷತ್ ಸದಸ್ಯೆ ಮನೀಷಾ ಕಾಯಂದೆ ಪ್ರಸ್ತಾಪಿಸಿದ್ದರು.

‘ಮತಾಂತರಗೊಳ್ಳುವಂತೆ ಅತ್ತೆ–ಮಾವ ಒತ್ತಡ ಹೇರುತ್ತಿದ್ದರಿಂದ ಬೇಸತ್ತ ಗರ್ಭಿಣಿಯೊಬ್ಬರು ಸಾಂಗ್ಲಿ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತಾಂತರ ಮಾಡುವ ವಿಚಾರವಾಗಿ ಪುಣೆಯ ಕುಟುಂಬವೊಂದರಲ್ಲಿ ಜಟಾಪಟಿ ನಡೆದಿದ್ದು, ಎರಡೂ ಕಡೆಯವರ ದೂರಿನ ಆಧಾರದಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ’ ಎಂದು ಕಾಯಂದೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.