ಪುಣೆ: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋಳೆವಾಡಿಯಲ್ಲಿ ನಡೆದ ಗ್ರಾಮಸಭೆಯು, ಮುಂಬರುವ ಎಲ್ಲ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬದಲು ಮತಪತ್ರಗಳನ್ನು ಬಳಸಲು ನಿರ್ಣಯ ಅಂಗೀಕರಿಸಿದೆ.
ಈ ಮೂಲಕ, ಚುನಾವಣೆಗಳಲ್ಲಿ ಇವಿಎಂ ಬಳಕೆಯನ್ನು ನಿರ್ಬಂಧಿಸಿ ನಿರ್ಣಯ ಕೈಗೊಂಡಿರುವ ಮಹಾರಾಷ್ಟ್ರದ ಎರಡನೇ ಗ್ರಾಮ ಎನಿಸಿದೆ.
ಕೋಳೆವಾಡಿ ಗ್ರಾಮ ಪಂಚಾಯಿತಿಯು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚವಾಣ್ ಅವರು ಈ ಹಿಂದೆ ಪ್ರತಿನಿಧಿಸುತ್ತಿದ್ದ ಕರದ್ ವಿಧಾನಸಭಾ ಕ್ಷೇತ್ರದಲ್ಲಿದೆ. ಅವರು ಈ ವರ್ಷ ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅತುಲ್ ಭೋಸಲೆ ಎದುರು 39 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.
ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರ ಬೆನ್ನಲ್ಲೆ, ಮುಂಬರುವ ಎಲ್ಲ ಚುನಾವಣೆಗಳಲ್ಲಿ ಮತಪತ್ರಗಳ ಮೂಲಕವೇ ಮತದಾನ ಪ್ರಕ್ರಿಯೆ ನಡೆಸಲು ಗ್ರಾಮಸಭೆಯು ನಿರ್ಣಯ ಅಂಗೀಕರಿಸಿದೆ.
ನಿರ್ಣಯದ ಪ್ರತಿ ಸಿಕ್ಕಿಲ್ಲ– ಜಿಲ್ಲಾಧಿಕಾರಿ: ‘ಚುನಾವಣೆಗಳಲ್ಲಿ ಇವಿಎಂ ಬದಲು ಮತಪತ್ರ ಬಳಸುವಂತೆ ಗ್ರಾಮಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದ ಪ್ರತಿ ಜಿಲ್ಲಾಡಳಿತ ಕಚೇರಿಗೆ ಬಂದಿಲ್ಲ. ಹೀಗಾಗಿ, ಈ ಬಗ್ಗೆ ಈಗಲೇ ಮಾತನಾಡುವುದು ಸೂಕ್ತವಲ್ಲ. ನಿರ್ಣಯದ ಪ್ರತಿ ಸಿಕ್ಕ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾತಾರಾ ಜಿಲ್ಲಾಧಿಕಾರಿ ಜಿತೇಂದ್ರ ಡೂಡಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.