ADVERTISEMENT

ಅಂಚೆ ಮೂಲಕ ಮತದಾನಕ್ಕೆ ಟ್ರಂಪ್ ವಿರೋಧ

ನಕಲಿ ಮತದಾನಕ್ಕೆ ಅವಕಾಶ, ಡೆಮಾಕ್ರಟಿಕ್ ರಾಜ್ಯಪಾಲರಿಂದ ಮತಪತ್ರಗಳ ನಿಯಂತ್ರಣ

ಪಿಟಿಐ
Published 17 ಸೆಪ್ಟೆಂಬರ್ 2020, 6:20 IST
Last Updated 17 ಸೆಪ್ಟೆಂಬರ್ 2020, 6:20 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪಕ್ಕಿಂತ, ಅಂಚೆ ಮತದಾನ ಮಾಡುವ ಪ್ರಕ್ರಿಯೆ ಬಹುದೊಡ್ಡ ಬೆದರಿಕೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಈ ಪ್ರಕ್ರಿಯೆ ನಡೆಯುವುದರಿಂದ ನಕಲಿ ಮತದಾನಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧಪಕ್ಷ ಡೆಮಾಕ್ರಟಿಕ್ ಪಕ್ಷ ಆಡಳಿತವಿರುವ ರಾಜ್ಯಗಳ ರಾಜ್ಯಪಾಲರು ಅಂಚೆ ಮತದಾನ ಮಾಡುವುದನ್ನು ಉತ್ತೇಜಿಸುತ್ತಿದ್ದಾರೆ. ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ ಈ ಕಾಲದಲ್ಲಿ ಈ ಪ್ರಕ್ರಿಯೆಯೇ ಆದ್ಯತೆಯಾಗಬೇಕು ಎಂದು ಹೇಳಿದ್ದಾರೆ. ಆದರೆ, ಇವರು ಲಕ್ಷಾಂತರ ಮತಪತ್ರಗಳನ್ನೇ ನಿಯಂತ್ರಿಸುತ್ತಾರೆ. ಇದು ಅಧ್ಯಕ್ಷೀಯ ಚುನಾವಣೆಯಲ್ಲಿ ನಮಗೆ ಎದುರಾಗಿರುವ ದೊಡ್ಡ ಆತಂಕ. ಇದು ಚುನಾವಣೆಯಲ್ಲಿ ವಿದೇಶಿಗರ ಹಸ್ತಕ್ಷೇಪಕ್ಕಿಂತ ಬಹಳ ದೊಡ್ಡ ಬೆದರಿಕೆ‘ ಎಂದು ತಿಳಿಸಿದ್ದಾರೆ.

‘ಅಂಚೆ ಮತದಾನ ಮಾಡುವುದರಿಂದ ನಕಲಿ ಮತದಾನಕ್ಕೆ ಅವಕಾಶ ನೀಡಿದಂತಾಗುತ್ತದೆ. ಯಾರದ್ದೋ ಮತವನ್ನು ಅವರ ಪರವಾಗಿ ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರಗಳೂನಾಪತ್ತೆಯಾಗುತ್ತವೆ‘ ಎಂದೂ ಹೇಳಿದ್ದಾರೆ.

ADVERTISEMENT

ಆದರೆ ತಮ್ಮ ವಾದ ಮುಂದುವರಿಸುವ ಡೆಮಾಕ್ರಟಿಕ್ ಪಕ್ಷದವರು, ‘ಅಂಚೆ ಮೂಲಕ ಮತದಾನ ಪ್ರಕ್ರಿಯೆ ಈಗಾಗಲೇ ಮೊದಲಿನಿಂದಲೂ ನಡೆದುಕೊಂಡು ಬಂದಿರುವಂಥದ್ದು. ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿರುವ ಸಂದರ್ಭದಲ್ಲಿ ಈ ರೀತಿಯ ಮತದಾನದ ಪ್ರಕ್ರಿಯೇ ಆದ್ಯತೆಯಾಗಬೇಕು‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.