ADVERTISEMENT

ತಮಿಳುನಾಡಿನಲ್ಲಿ ವಲಸಿಗರ ಮೇಲೆ ದಾಳಿ ನಡೆಯುತ್ತಿರುವಂತೆ ವಿಡಿಯೊ ಮಾಡಿದ್ದವರ ಸೆರೆ

ಐಎಎನ್ಎಸ್
Published 11 ಮಾರ್ಚ್ 2023, 3:17 IST
Last Updated 11 ಮಾರ್ಚ್ 2023, 3:17 IST
ಬಿಹಾರದ ವಲಸಿಗರ ಮೇಲೆ ತಮಿಳುನಾಡಿನಲ್ಲಿ ದಾಳಿ ನಡೆಯುತ್ತಿರುವುದಾಗಿ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದ ವಿಡಿಯೊ
ಬಿಹಾರದ ವಲಸಿಗರ ಮೇಲೆ ತಮಿಳುನಾಡಿನಲ್ಲಿ ದಾಳಿ ನಡೆಯುತ್ತಿರುವುದಾಗಿ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದ ವಿಡಿಯೊ    

ಪಟ್ನಾ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಯುತ್ತಿರುವಂತೆ 'ನಕಲಿ' ವಿಡಿಯೊ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದ ಪ್ರಮುಖ ಆರೋಪಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

ರಾಕೇಶ್‌ ರಂಜನ್‌ ಬಂಧಿತ ಆರೋಪಿ. ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಮನೀಶ್ ಕಶ್ಯಪ್ ಮತ್ತು ಯುವರಾಜ್ ಸಿಂಗ್ ತಲೆಮರೆಸಿಕೊಂಡಿದ್ದು, ಅವರ ಅಡಗುತಾಣಗಳ ಮೇಲೆ ಬಿಹಾರ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಜಮುಯಿ ಜಿಲ್ಲೆಯವನಾದ ಅಮನ್ ಕುಮಾರ್ ಎಂಬಾತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

‘ಪ್ರಮುಖ ಆರೋಪಿ ಗೋಪಾಲ್‌ಗಂಜ್ ಜಿಲ್ಲೆಯ ರಾಕೇಶ್ ರಂಜನ್ ಕುಮಾರ್ ಮಾರ್ಚ್ 6 ರಂದು ಪಟ್ನಾದ ಜಕ್ಕನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗಾಲಿ ಕಾಲೋನಿಯಲ್ಲಿ ಇಬ್ಬರು ವ್ಯಕ್ತಿಗಳ ನೆರವಿನೊಂದಿಗೆ ಬಾಡಿಗೆ ಮನೆಯಲ್ಲಿ ನಕಲಿ ವಿಡಿಯೊ ತಯಾರಿಸಿದ್ದ. ಈ ಕೃತ್ಯವನ್ನು ಆತನೇ ಒಪ್ಪಿಕೊಂಡಿದ್ದಾನೆ. ಬಿಹಾರ ಮತ್ತು ತಮಿಳುನಾಡಿನ ಪೊಲೀಸರನ್ನು ದಾರಿ ತಪ್ಪಿಸುವುದೇ ಈ ನಕಲಿ ವಿಡಿಯೊದ ಹಿಂದಿನ ಉದ್ದೇಶವಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ರಾಕೇಶ್ ರಂಜನ್ ಕುಮಾರ್‌ನ ಮನೆ ಮಾಲೀಕನನ್ನೂ ವಿಚಾರಣೆ ಮಾಡಲಾಗಿತ್ತು, ಅವರ ಮನೆಯಲ್ಲೇ ಈ ವಿಡಿಯೊ ಮಾಡಲಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅದರಂತೆ, ತನಿಖಾ ತಂಡವು ರಾಕೇಶ್ ರಂಜನ್, ಮನೀಶ್ ಕಶ್ಯಪ್, ಯುರಾಜ್ ಸಿಂಗ್ ಮತ್ತು ಅಮನ್ ಕುಮಾರ್ ವಿರುದ್ಧ ಪಾಟ್ನಾದ ಆರ್ಥಿಕ ಅಪರಾಧ ಘಟಕ (ಇಒಯು) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ.

ರಾಕೇಶ್ ರಂಜನ್ ಕುಮಾರ್ ಮಾಡಿದ ವೀಡಿಯೊವನ್ನು ಮನೀಶ್ ಕಶ್ಯಪ್ ಎಂಬ ವ್ಯಕ್ತಿ ಮಾರ್ಚ್ 8 ರಂದು ಟ್ವೀಟ್ ಮಾಡಿದ್ದ. ‘ಬಿಎನ್ ಆರ್ ನ್ಯೂಸ್ ಹನಿ’ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಅಪ್ಲೋಡ್ ಮಾಡಿದ್ದ.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಪರಿಣಾಮವಾಗಿ ತಮಿಳುನಾಡಿನಲ್ಲಿ ಉತ್ತರ ಭಾರತೀಯರ ಮೇಲೆ ದಾಳಿಗಳಾಗುತ್ತಿವೆ ಎಂಬ ವದಂತಿ ಹರಡಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌, ರಾಜ್ಯದಲ್ಲಿ ಅಂಥ ಯಾವುದೇ ದುರ್ಘಟನೆ ನಡೆದಿಲ್ಲ. ತಮಿಳುನಾಡಿನಲ್ಲಿ ವಲಸಿಗರಿಗೆ ಸುರಕ್ಷತೆ ಇದೆ. ವಿಡಿಯೊ ಹಿಂದೆ ಬಿಹಾರದ ಬಿಜೆಪಿ ನಾಯಕರ ಕೈವಾಡವಿದೆ ಎಂದು ಆರೋಪಿಸಿದ್ದರು. ಬಿಹಾರ ವಿಧಾನಸಭೆಯಲ್ಲಿಯೂ ಈ ವಿಡಿಯೊ ವಿಚಾರ ಚರ್ಚೆಯಾಗಿತ್ತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.