ತಿರುವನಂತಪುರ: ಮಗಳ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಯುವತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಮಲಯಾಳಂ ನಟ ಹಾಗೂ ರಾಜಕಾರಣಿ ಜಿ. ಕೃಷ್ಣಮೂರ್ತಿ ಹಾಗೂ ಅವರ ಮಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಕ್ಕೊಳಗಾದ ಯುವತಿ ನೀಡಿದ ದೂರಿನ ಆಧಾರದಲ್ಲಿ ಶನಿವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯುವತಿಯ ವಿರುದ್ಧ ಕಂಪನಿಯ ಸ್ವತ್ತುಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಕೃಷ್ಣಮೂರ್ತಿ ಹಾಗೂ ಅವರ ಮಗಳು ಕೂಡ ಪ್ರಕರಣ ದಾಖಲಿಸಿದ್ದಾರೆ.
ಎರಡು ಬೇರೆ ಬೇರೆ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ತನಿಖೆ ಆರಂಭಿಸಿದ್ದು, ಸಾಕ್ಷಿಗಳ ಆಧಾರದಲ್ಲಿ ಮಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿರುವ ಕೃಷ್ಣಮೂರ್ತಿ ‘ನನ್ನ ಮಗಳು ಗರ್ಭಿಣಿಯಾಗಿದ್ದಾಗ ಅವಳಿಗೆ ಕಂಪನಿಯ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಅದೇ ಸಂದರ್ಭದಲ್ಲಿ ಮೂವರು ಮಹಿಳಾ ಉದ್ಯೋಗಿಗಳು ಸುಮಾರು ₹69ಲಕ್ಷವನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ಎಂದು ಆರೋಪಿಸಿದ್ದಾರೆ.
‘ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬರುತ್ತಿದ್ದಂತೆಯೇ, ಪೊಲೀಸರಿಗೆ ದೂರು ಕೊಡುವುದಾಗಿ ತಿಳಿಸಿದಾಗ ಅವರು ತಮ್ಮ ಗಂಡಂದಿರ ಜೊತೆಗೆ ಬಂದು ತಪ್ಪನ್ನು ಒಪ್ಪಿಕೊಂಡಿದ್ದರು. ಪೊಲೀಸ್ ಪ್ರಕರಣ ದಾಖಲಿಸಬೇಡಿ ಎಂದು ತಕ್ಷಣವೇ ₹8ಲಕ್ಷವನ್ನು ಕೊಟ್ಟು, ಬಾಕಿ ಮೊತ್ತವನ್ನು ಶೀಘ್ರದಲ್ಲಿ ಪಾವತಿಸುವುದಾಗಿ ಹೇಳಿದ್ದರು. ಆದರೆ, ಕೆಲವು ದಿನಗಳ ನಂತರ ಅದರಲ್ಲೊಬ್ಬರು ನನ್ನ ಮಗಳಿಗೆ ಕರೆ ಮಾಡಿ ಬೆದರಿಕೆಯಾಕಿದ್ದರು. ಘಟನೆಗೆ ಸಂಬಂಧಿಸಿದಂತೆ ಮೇ 30 ಅಥವಾ 31ರಂದು ಪ್ರಕರಣ ಕೂಡ ದಾಖಲಿಸಲಾಗಿತ್ತು ಎಂದರು.
ನಾವು ಪ್ರಕರಣ ದಾಖಲಿಸಿದ ಮೇಲೆ ಅವರು ನಮ್ಮ ಕುಟುಂಬದ 6 ಜನರ ವಿರುದ್ದ ನಕಲಿ ಆರೋಪ ಮಾಡಿದ್ದಾರೆ ಎಂದು ಹೇಳಿದರು.
ಮೂವರು ಉದ್ಯೋಗಿಗಳು ಹಣವನ್ನು ದುರುಪಯೋಗ ಪಡಿಸಿಕೊಂಡ ಕುರಿತು ಹಾಗೂ ಅವರು ತಪ್ಪೊಪ್ಪಿಗೆ ಹೇಳಿಕೆ ನೀಡಿರುವ ಕುರಿತು ವಿಡಿಯೊ ಸಾಕ್ಷಿಯಿದೆ. ಅದನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.