ಮೇಜರ್ (ನಿವೃತ್ತ) ಸಮೀರ್ ಕುಲಕರ್ಣಿ, ರಮೇಶ್ ಉಪಾಧ್ಯಾಯ, ಲೆಫ್ಟಿನೆಂಟ್ ಕರ್ನಲ್ ಪ್ರಸಾದ ಪುರೋಹಿತ, ಪ್ರಜ್ಞಾ ಸಿಂಗ್ ಠಾಕೂರ್, ಅಜಯ್ ರಾಹಿರ್ಕರ್
ಪಿಟಿಐ ಚಿತ್ರಗಳು
ಮುಂಬೈ: ಮಹಾರಾಷ್ಟ್ರದ ಮಾಲೇಗಾಂವ್ ಪಟ್ಟಣದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ಇಲ್ಲಿನ ಎನ್‌ಐಎ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
‘ಆರೋಪಿಗಳ ವಿರುದ್ಧ ನಂಬಲರ್ಹ ಹಾಗೂ ಬಲವಾದ ಸಾಕ್ಷ್ಯಗಳು ಇಲ್ಲ’ ಎಂದು ನ್ಯಾಯಾಲಯ ಹೇಳಿದೆ.
‘ಭಯೋತ್ಪಾದನೆಗೆ ಧರ್ಮ ಇಲ್ಲ. ಅಲ್ಲದೇ, ಕೇವಲ ಗ್ರಹಿಕೆ ಆಧಾರದ ಮೇಲೆ ಅಪರಾಧಿಗಳೆಂದು ಘೋಷಿಸಲು ಸಾಧ್ಯ ಇಲ್ಲ. ಸಂದೇಹವನ್ನು ಯಾವತ್ತಿಗೂ ನೈಜ ಸಾಕ್ಷ್ಯವೆಂದು ಪರಿಗಣಿಸಲಾಗದು’ ಎಂದು ತೀರ್ಪು ಓದಿದ ವಿಶೇಷ ನ್ಯಾಯಾಧೀಶ ಎ.ಕೆ.ಲಾಹೋಟಿ ಹೇಳಿದರು.
ಬಾಂಬ್ ಸ್ಫೋಟದಿಂದ ಪ್ರಾಣ ಕಳೆದುಕೊಂಡಿರುವ 6 ಜನರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡಿದ್ದ 101 ಮಂದಿಗೆ ತಲಾ ₹50 ಸಾವಿರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ, ಮೇಜರ್ ರಮೇಶ್ ಉಪಾಧ್ಯಾಯ (ಸದ್ಯ ನಿವೃತ್ತ), ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಹಾಗೂ ಸಮೀರ್ ಕುಲಕರ್ಣಿ ಖುಲಾಸೆಗೊಂಡವರು.
ಇವರ ವಿರುದ್ಧ ಯುಎಪಿಎ, ಭಾರತೀಯ ದಂಡ ಸಂಹಿತೆ ಹಾಗೂ ಶಸ್ತ್ರಾಸ್ತ್ರಗಳ ಕಾಯ್ದೆಯ ವಿವಿಧ ಅವಕಾಶಗಳಡಿ ಪ್ರಕರಣ ದಾಖಲಿಸಲಾಗಿತ್ತು. ಒಟ್ಟು 323 ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿತ್ತು. ಈ ಪೈಕಿ, 37 ಮಂದಿ ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು.
ಮುಂಬೈನಿಂದ 200 ಕಿ.ಮೀ. ದೂರದಲ್ಲಿರುವ ಮಾಲೇಗಾಂವ್ ಪಟ್ಟಣದಲ್ಲಿ, 2008ರ ಸೆಪ್ಟೆಂಬರ್ 29ರಂದು ದ್ವಿಚಕ್ರ ವಾಹನವೊಂದರಲ್ಲಿ ಇಡಲಾಗಿದ್ದ ಬಾಂಬ್ ಸ್ಫೋಟಗೊಂಡು ಆರು ಜನ ಮೃತಪಟ್ಟು, ಇತರ 101 ಮಂದಿ ಗಾಯಗೊಂಡಿದ್ದರು.
2018ರಲ್ಲಿ ಆರಂಭಗೊಂಡಿದ್ದ ತನಿಖೆ ಕಳೆದ ಏಪ್ರಿಲ್ 19ರಂದು ಮುಕ್ತಾಯಗೊಂಡಿತ್ತು. ಘಟನೆ ನಡೆದು 17 ವರ್ಷಗಳ ನಂತರ, ಪ್ರಕರಣದ ಎಲ್ಲ ಆರೋಪಿಗಳು ದೋಷಮುಕ್ತರಾಗಿದ್ದಾರೆ.
ತನಿಖೆಯ ಹಾದಿ: ಆರಂಭದಲ್ಲಿ, ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆ ಕೈಗೊಂಡಿತ್ತು. ಬಲಪಂಥೀಯ ಸಂಘಟನೆ ‘ಅಭಿನವ ಭಾರತ’ದ ಸದಸ್ಯರ ವಿರುದ್ಧ ಬೊಟ್ಟು ಮಾಡಿತ್ತು. ನಂತರ, ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಯಿತು.
ಎನ್‌ಐಎ, ಪ್ರಜ್ಞಾ ಠಾಕೂರ್ ಅವರಿಗೆ ಕ್ಲೀನ್‌ಚಿಟ್ ನೀಡಿತ್ತು. ಇದನ್ನು ನ್ಯಾಯಾಲಯ ಒಪ್ಪಿರಲಿಲ್ಲ. ಮೇಲ್ನೋಟಕ್ಕೆ ಅವರ ವಿರುದ್ಧ ಸಾಕ್ಷ್ಯಗಳಿವೆ ಎಂದಿದ್ದ ಕೋರ್ಟ್, ಮರುತನಿಖೆಗೆ ಆದೇಶಿಸಿತ್ತು.
ಮುಸ್ಲಿಂ ಬಾಹುಳ್ಯವಿರುವ ಮಾಲೇಗಾಂವ್‌ನಲ್ಲಿ ಬಾಂಬ್ ಸ್ಫೋಟಿಸುವ ಮೂಲಕ, ಕೆಲ ಮುಸ್ಲಿಮರನ್ನು ಭಯೋತ್ಪಾದಕರಂತೆ ಬಿಂಬಿಸಿ ಕೋಮು ಸಂಘರ್ಷ ಉಂಟುಮಾಡುವ ಉದ್ದೇಶದಿಂದ ಕೆಲವು ಸಂಚುಕೋರರು ಈ ಕೃತ್ಯ ಎಸಗಿದ್ದರು ಎಂದು ಎನ್‌ಐಎ ಹೇಳಿದೆ.
ರಂಜಾನ್ ತಿಂಗಳಲ್ಲಿ ಈ ಸ್ಫೋಟ ಸಂಭವಿಸಿತ್ತು. ಕೆಲ ದಿನಗಳ ನಂತರ ನವರಾತ್ರಿ ಹಬ್ಬ ಆರಂಭವಾಗಲಿತ್ತು. ಇದೇ ಸಂದರ್ಭದಲ್ಲಿಯೇ ಸ್ಫೋಟ ಸಂಭವಿಸಿತ್ತು.
ಬಿಗಿ ಬಂದೋಬಸ್ತ್: ತೀರ್ಪು ಪ್ರಕಟಿಸುವುದಕ್ಕೂ ಮುನ್ನ ಎಲ್ಲ ಏಳು ಜನ ಆರೋಪಿಗಳು, ದಕ್ಷಿಣ ಮುಂಬೈನಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಹಾಜರಿದ್ದರು. ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದರು. ನ್ಯಾಯಾಲಯ ಆವರಣ ಹಾಗೂ ಹೊರಗೆ ತಡಗೋಡೆಗಳನ್ನು ಅಳವಡಿಸಿ, ವ್ಯಾಪಕ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.
ಸುಧಾಕರ್ ಚತುರ್ವೇದಿ
ಕೋರ್ಟ್ ಹೇಳಿದ್ದೇನು?
* ಬಾಂಬ್ ಸ್ಫೋಟಕ್ಕೆ ಕಾರಣವಾಗಿದ್ದ ದ್ವಿಚಕ್ರ ವಾಹನ ಪ್ರಜ್ಞಾ ಠಾಕೂರ್ ಅವರಿಗೆ ಸೇರಿದ್ದು ಅಥವಾ ಅವರ ಹೆಸರಿನಲ್ಲಿ ನೋಂದಣಿಯಾಗಿದ್ದು ಎಂಬುದನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ
* ಬಾಂಬ್ ಸ್ಫೋಟವಾಗಿತ್ತು ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ. ಆದರೆ ಆ ಬಾಂಬ್ ಅನ್ನು ದ್ವಿಚಕ್ರ ವಾಹನದಲ್ಲಿ ಇಡಲಾಗಿತ್ತು ಎಂಬುದನ್ನು ಸಾಬೀತುಪಡಿಸಿಲ್ಲ
* ತನಿಖೆಯು ಸಾಕಷ್ಟು ಲೋಪದೋಷಗಳಿಂದ ಕೂಡಿದೆ. ಸಾಕ್ಷ್ಯಗಳೇ ಇರದ ಕಾರಣ ಆರೋಪಿಗಳು ಸಂದೇಹದ ಲಾಭ ಪಡೆಯಲು ಅರ್ಹರು
* ಪ್ರಾಸಿಕ್ಯೂಷನ್ ಒದಗಿಸಿರುವ ಸಾಕ್ಷ್ಯಗಳು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸುವುದಕ್ಕೆ ಪೂರಕವಾಗಿಲ್ಲ
* ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅವಕಾಶಗಳು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ
ಭಗವಾಕ್ಕೆ ಸಂದ ಜಯ: ಠಾಕೂರ್
ತಮ್ಮನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ‘ಭಗವಾ ಕಿ ಜೀತ್ ಹುಯಿ ಹಿಂದುತ್ವ ಕಿ ಜೀತ್ ಹುಯಿ (ಭಗವಾ ಗೆದ್ದಿತು ಹಿಂದುತ್ವ ಗೆದ್ದಿತು) ಎಂದು ಭಾವುಕರಾಗಿ ಹೇಳಿದರು. ‘ಇದು ನನಗೆ ಸಿಕ್ಕ ಗೆಲುವು ಮಾತ್ರವಲ್ಲ ಇದು ಭಗವಾಕ್ಕೂ (ಕೇಸರಿ) ಸಂದ ಜಯ. ಕಳೆದ 17 ವರ್ಷ ನನ್ನ ಜೀವನ ಹಾಳಾಯಿತು. ಭಗವಾಕ್ಕೆ ಅವಮಾನ ಮಾಡಲು ಯತ್ನಿಸಿದವರನ್ನು ದೇವರು ಶಿಕ್ಷಿಸದೇ ಬಿಡುವುದಿಲ್ಲ’ ಎಂದರು.
‘ನಾನು ಸನ್ಯಾಸಿನಿ ಆಗಿರುವುದರಿಂದಲೇ ಇಂದು ಜೀವಂತವಾಗಿರುವೆ. ಪಿತೂರಿ ನಡೆಸುವ ಮೂಲಕ ಅವರು ಭಗವಾಧ್ವಜಕ್ಕೆ ಅವಮಾನಿಸಿದರು. ಇಂದು ಭಗವಾಕ್ಕೆ ಜಯ ಸಿಕ್ಕಿದೆ’ ಎಂದು ಹೇಳಿದರು. ‘ಯಾವ ಕಾರಣವೂ ಇಲ್ಲದೆಯೇ ವಿಚಾರಣೆಗೆ ಹಾಜರಾಗುವಂತೆ ನನಗೆ ಸೂಚಿಸಲಾಗುತ್ತಿತ್ತು. ವಿಚಾರಣೆಗೆ ಬರುವಂತೆ ನನ್ನನ್ನು ಕರೆಸಿಕೊಂಡಿದ್ದ ಅಧಿಕಾರಿಗಳು ನಂತರ ನನ್ನನ್ನು ಬಂಧಿಸಿ ಚಿತ್ರಹಿಂಸೆ ನೀಡಿದರು. ಈ ಪ್ರಕರಣ ನನ್ನ ಇಡೀ ಜೀವನವನ್ನೇ ಹಾಳುಮಾಡಿತು’ ಎಂದು ಹೇಳಿದರು.
ಸಶಸ್ತ್ರ ಪಡೆಗಳಿಗೆ ಧನ್ಯವಾದ: ಪುರೋಹಿತ
‘ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯುದ್ದಕ್ಕೂ ನನ್ನ ಬೆನ್ನಿಗೆ ನಿಂತ ಭಾರತೀಯ ಸೇನೆಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ’ ಎಂದು ಸೇನೆಯ ಗುಪ್ತಚರ ವಿಭಾಗದ ಮಾಜಿ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ ಪ್ರತಿಕ್ರಿಯಿಸಿದರು. ‘ನನ್ನ ಪಾಲಿಗೆ ದೇಶವೇ ಸರ್ವಸ್ವ. ಸೇನೆ ಮತ್ತು ಆ ಮೂಲಕ ದೇಶ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ನಿಮಗೆ ಧನ್ಯವಾದ ಹೇಳುವೆ. ನನ್ನ ಎಲ್ಲ ಸಹೋದ್ಯೋಗಿಗಳು ಹಾಗೂ ಗೆಳೆಯರಿಗೂ ಧನ್ಯವಾದ ಹೇಳುವೆ’ ಎಂದರು. ‘ಇಷ್ಟೆಲ್ಲಾ ನಡೆದಿರುವುದಕ್ಕೆ ಸಂಬಂಧಿಸಿ ನಾನು ಯಾವ ಸಂಘಟನೆಗಳನ್ಣೂ ದೂಷಿಸಲು ಇಚ್ಛಿಸುವುದಿಲ್ಲ. ತನಿಖಾ ಸಂಸ್ಥೆಗಳ ತಪ್ಪು ಇಲ್ಲ. ಆದರೆ ಸಂಸ್ಥೆಯಲ್ಲಿನ ಕೆಲ ವ್ಯಕ್ತಿಗಳು ತಪ್ಪು ಮಾಡಿದರು. ವ್ಯವಸ್ಥೆ ಕುರಿತಂತೆ ಸಾಮಾನ್ಯ ಜನರಿಗೆ ಇರುವ ನಂಬಿಕೆಯನ್ನು ಮರುಸ್ಥಾಪನೆ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದ ಹೇಳುತ್ತೇನೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ಭಾಗವತ್ ಯೋಗಿ ಹೆಸರಿಸುವಂತೆ ಸೂಚನೆ’ ಅದೊಂದು ಭಯಾನಕ ಅನುಭವ. ನಾನು ಕಸ್ಟಡಿಯಲ್ಲಿದ್ದಾಗ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೋಹನ್ ಭಾಗವತ್ (ಈಗ ಆರ್‌ಎಸ್‌ಎಸ್ ಮುಖ್ಯಸ್ಥ) ಯೋಗಿ ಆದಿತ್ಯನಾಥ (ಸದ್ಯ ಉತ್ತರ ಪ್ರದೇಶ ಮುಖ್ಯಮಂತ್ರಿ) ಅವರನ್ನು ಹೆಸರಿಸುವಂತೆ ಸೂಚಿಸಲಾಗುತ್ತಿತ್ತು. ಇದೊಂದು ಸಂಪೂರ್ಣ ರಾಜಕೀಯ ಪ್ರೇರಿತ ಪ್ರಕರಣ ಎಂದು ಸುಧಾಕರ್ ಚತುರವೇದಿ ಹೇಳಿದ್ದಾರೆ. ಈಗ ಖುಲಾಸೆಗೊಂಡಿದ್ದೇನೆ. ಆದರೆ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ನಂತರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಖಾತ್ರಿ. ನಮ್ಮ ಹೋರಾಟ ಮುಂದುವರಿಯತ್ತದೆ ಎಂದಿದ್ದಾರೆ. ಕೆಲ ವರ್ಷಗಳ ಹಿಂದೆಯಷ್ಟೆ ನಾನು ಸನ್ಯಾಸ ಸ್ವೀಕರಿಸಿದ್ದೇನೆ. ಈಗ ಏನು ಮಾಡಬೇಕು ಎಂದು ತೋಚುತ್ತಿಲ್ಲ. ಎಲ್ಲಿ ಹೋಗಬೇಕು ಎಂದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಖುಲಾಸೆ: ವಿಶ್ವಾಸ ಇತ್ತು
ಕಳೆದ 17 ವರ್ಷಗಳಿಂದ ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ನನಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ನಾವು ನಿರಪರಾಧಿಗಳು ಎಂಬ ಸತ್ಯಸಂಗತಿಗೆ ನ್ಯಾಯಾಲಯ ಮುದ್ರೆ ಒತ್ತುತ್ತದೆ ಎಂಬ ವಿಶ್ವಾಸ ಇತ್ತು ಎಂದು ಸಮೀರ್ ಕುಲಕರ್ಣಿ ಹೇಳಿದ್ದಾರೆ. ‘ನಮಗೆ ಆಘಾತವಾಗಿದೆ’ ‘ಬಾಂಬ್ ಸ್ಫೋಟ ಪ್ರಕರಣ ಕುರಿತ ತೀರ್ಪು ಹೊರಬಿದ್ದ ಮೇಲೆ ನಾವು ಆಘಾತಕ್ಕೆ ಒಳಗಾಗಿದ್ದೇವೆ. ಈ ಘಟನೆಯಲ್ಲಿ ಮೃತಪಟ್ಟವರಿಗೆ ನ್ಯಾಯ ಸಿಕ್ಕಿಲ್ಲ’ ಎಂದು ಈ ಪ್ರಕರಣ ಕುರಿತು ಕಾನೂನು ಹೋರಾಟ ನಡೆಸಿರುವ ಫಿರೋಜ್ ಅಹ್ಮದ್ ಆಜ್ಮಿ ಪ್ರತಿಕ್ರಿಯಿಸಿದ್ದಾರೆ.
ಕೇಸರಿ ಭಯೋತ್ಪಾದನೆ ಎಂಬುದು ಇರಲಿಲ್ಲ. ಮುಂದೆಯೂ ಇರುವುದಿಲ್ಲದೇವೇಂದ್ರ ಫಡಣವೀಸ್ ಮಹಾರಾಷ್ಟ್ರ ಮುಖ್ಯಮಂತ್ರಿ
ಏಳು ಜನ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಮೇಲ್ಮನವಿ ಸಲ್ಲಿಸಬೇಕುಇಮ್ತಿಯಾಜ್ ಜಲೀಲ್ ಎಐಎಂಐಎಂ ಮುಖಂಡ
ನ್ಯಾಯಾಲಯದ ಈ ತೀರ್ಪು ಕಾಂಗ್ರೆಸ್ ಪಕ್ಷಕ್ಕೆ ಮಾಡಿರುವ ಕಪಾಳಮೋಕ್ಷ. ಕೇಸರಿ ಭಯೋತ್ಪಾದನೆ ಸಂಕಥನ ಸೃಷ್ಟಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಕ್ಷಮೆ ಕೇಳಬೇಕುಶ್ರೀಕಾಂತ ಶಿಂದೆ ಶಿವಸೇನಾ ಸಂಸದ
ಭಯೋತ್ಪಾದನೆಯನ್ನು ಯಾವುದೇ ಧರ್ಮದೊಂದಿಗೆ ತಳುಕು ಹಾಕಬಾರದು. ಯಾವ ಮತವೂ ಹಿಂಸೆಗೆ ಪ್ರಚೋದಿಸುವುದಿಲ್ಲದಿಗ್ವಿಜಯ ಸಿಂಗ್ ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.