ADVERTISEMENT

Malegaon Blasts Case | ಆರೋಪದಿಂದ ಖುಲಾಸೆವರೆಗೆ ಪ್ರಕರಣ ಸಾಗಿಬಂದ ಹಾದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2025, 8:01 IST
Last Updated 31 ಜುಲೈ 2025, 8:01 IST
<div class="paragraphs"><p>ಸಾಧ್ವಿ ಪ್ರಜ್ಞಾ ಸಿಂಗ್,</p></div>

ಸಾಧ್ವಿ ಪ್ರಜ್ಞಾ ಸಿಂಗ್,

   

ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್ ಸೇರಿದಂತೆ 7 ಆರೋಪಿಗಳನ್ನು ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

2008ರ ಸೆಪ್ಟೆಂಬರ್ 29ರಂದು ರಂಜಾನ್‌ ಮಾಸದಲ್ಲಿ ನವರಾತ್ರಿ ಆಚರಣೆಯ ಮುನ್ನಾದಿನ ಸ್ಫೋಟ ನಡೆದಿತ್ತು. 6 ಜನರು ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ADVERTISEMENT

2008ರ ಸೆಪ್ಟೆಂಬರ್ 30: ಮಾಲೆಗಾಂವ್‌ನ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

2008ರ ಅಕ್ಟೋಬರ್ 21: ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತು.

2008ರ ಅಕ್ಟೋಬರ್ 23: ಪ್ರಕರಣ ಸಂಬಂಧ ಎಟಿಎಸ್‌ನಿಂದ ಪ್ರಜ್ಞಾ ಸಿಂಗ್ ಠಾಕೂರ್ ಸೇರಿ ಇತರ ಮೂವರನ್ನು ಬಂಧಿಸಿತ್ತು.

2008ರ ನವೆಂಬರ್: ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರನ್ನು ಎಟಿಎಸ್ ಬಂಧಿಸಿತ್ತು.

2009ರ ಜನವರಿ 20: ಪ್ರಜ್ಞಾ ಸಿಂಗ್ ಠಾಕೂರ್, ಪುರೋಹಿತ್ ಸೇರಿದಂತೆ 11 ಬಂಧಿತ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯದ ಮುಂದೆ ಎಟಿಎಸ್ ಆರೋಪಪಟ್ಟಿ ಸಲ್ಲಿಸಿತ್ತು. ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ), ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಠಿಣ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

2009ರ ಜುಲೈ: ಪ್ರಕರಣದಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ (ಎಂಸಿಒಸಿಎ) ನಿಬಂಧನೆಗಳು ಅನ್ವಯಿಸುವುದಿಲ್ಲ ಮತ್ತು ಆರೋಪಿಗಳನ್ನು ನಾಸಿಕ್‌ನಲ್ಲಿರುವ ನ್ಯಾಯಾಲಯವು ವಿಚಾರಣೆ ನಡೆಸುತ್ತದೆ ಎಂದು ವಿಶೇಷ ನ್ಯಾಯಾಲಯ ಹೇಳಿತ್ತು.

2009ರ ಆಗಸ್ಟ್: ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

2010ರ ಜುಲೈ: ಬಾಂಬೆ ಹೈಕೋರ್ಟ್ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ (ಎಂಸಿಒಸಿಎ) ಹೊರಿಸಲಾಗಿದ್ದ ಆರೋಪಗಳನ್ನು ಎತ್ತಿಹಿಡಿದಿತ್ತು.

2010ರ ಆಗಸ್ಟ್: ಪ್ರಜ್ಞಾ ಸಿಂಗ್ ಮತ್ತು ಪುರೋಹಿತ್ ಅವರು ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

2011ರ ಫೆಬ್ರುವರಿ: ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಪ್ರಕರಣ ಸಂಬಂಧ ಪ್ರವೀಣ್ ಮುತಾಲಿಕ್ ಅವರನ್ನು ಬಂಧಿಸಿತ್ತು. ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 12ಕ್ಕೆ ಏರಿತ್ತು.

2011ರ ಏಪ್ರಿಲ್ 13: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದ ತನಿಖೆ ವಹಿಸಿಕೊಂಡಿತು.

2012ರ ಫೆಬ್ರುವರಿ ಮತ್ತು ಡಿಸೆಂಬರ್: ಎನ್‌ಐಎ ಅಧಿಕಾರಿಗಳು ಲೋಕೇಶ್ ಶರ್ಮಾ ಮತ್ತು ಧನ್ ಸಿಂಗ್ ಚೌಧರಿ ಅವರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 14ಕ್ಕೆ ಏರಿತ್ತು.

2015ರ ಏಪ್ರಿಲ್: ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅನ್ವಯಿಸುವ ಬಗ್ಗೆ ಮರುಪರಿಶೀಲನೆಗಾಗಿ ಸುಪ್ರೀಂ ಕೋರ್ಟ್, ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.

2016ರ ಫೆಬ್ರುವರಿ: ಪ್ರಕರಣದಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ ನಿಬಂಧನೆಗಳು ಅನ್ವಯಿಸಬಹುದೇ ಎಂಬುದರ ಕುರಿತು ಅಟಾರ್ನಿ ಜನರಲ್ ಅವರ ಅಭಿಪ್ರಾಯವನ್ನು ಪಡೆದುಕೊಂಡಿರುವುದಾಗಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

2016ರ ಮೇ 13: ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಿತ್ತು. ಎಂಸಿಒಸಿಎ ನಿಬಂಧನೆಗಳನ್ನು ಪ್ರಕರಣದಿಂದ ಕೈಬಿಡಲಾಯಿತು ಮತ್ತು ಏಳು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿತ್ತು.

2017ರ ಏಪ್ರಿಲ್ 25: ಬಾಂಬೆ ಹೈಕೋರ್ಟ್ ಪ್ರಜ್ಞಾ ಠಾಕೂರ್‌ಗೆ ಜಾಮೀನು ನೀಡಿತ್ತು. ಪುರೋಹಿತ್‌ಗೆ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು.

2017ರ ಸೆಪ್ಟೆಂಬರ್ 21: ಪುರೋಹಿತ್‌ಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಸಿಕ್ಕಿತ್ತು. ವರ್ಷಾಂತ್ಯದ ವೇಳೆಗೆ ಬಂಧಿತ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದರು.

2017ರ ಡಿಸೆಂಬರ್ 27: ವಿಶೇಷ ಎನ್‌ಐಎ ನ್ಯಾಯಾಲಯವು ಆರೋಪಿಗಳಾದ ಶಿವನಾರಾಯಣ್ ಕಲ್ಸಂಗ್ರ, ಶ್ಯಾಮ್ ಸಾಹು, ಪ್ರವೀಣ್ ಮುತಾಲಿಕ್ ನಾಯಕ್ ಅವರನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿತ್ತು. ಯುಎಪಿಎ ಅಡಿಯಲ್ಲಿ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿರುವ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂಗ್ರಹಿದ ಆರೋಪಗಳನ್ನು ನ್ಯಾಯಾಲಯ ಕೈಬಿಟ್ಟಿತ್ತು.

2018ರ ಅಕ್ಟೋಬರ್ 18: ಪ್ರಕರಣದ ಏಳು ಆರೋಪಿಗಳಾದ ಪ್ರಜ್ಞಾ ಸಿಂಗ್, ಪುರೋಹಿತ್, ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಅಜಯ್ ರಹಿರ್ಕರ್, ಸುಧಾಕರ್ ದ್ವಿವೇದಿ ಮತ್ತು ಸುಧಾಕರ್ ಚತುರ್ವೇದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು.

2018ರ ಡಿಸೆಂಬರ್ 3: ಪ್ರಕರಣದ ಮೊದಲ ಸಾಕ್ಷಿಯ ವಿಚಾರಣೆ ನಡೆಸಲಾಯಿತು.

2023ರ ಸೆಪ್ಟೆಂಬರ್ 14: 323 ಪ್ರಾಸಿಕ್ಯೂಷನ್ ಸಾಕ್ಷಿಗಳ ಪರಿಶೀಲನೆ (ಅವರಲ್ಲಿ 37 ಮಂದಿ ಪ್ರತಿಕೂಲ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ)

2024ರ ಜುಲೈ 23: ಸಾಕ್ಷಿಗಳ ವಿಚಾರಣೆ ಮುಕ್ತಾಯ

2024ರ ಆಗಸ್ಟ್ 12: ವಿಶೇಷ ನ್ಯಾಯಾಲಯವು ಐಪಿಸಿ ಸೆಕ್ಷನ್ 313ರ ಅಡಿಯಲ್ಲಿ ಆರೋಪಿಗಳ ಅಂತಿಮ ಹೇಳಿಕೆಗಳನ್ನು ದಾಖಲಿಸಿತು. ಜತೆಗೆ, ಪ್ರಾಸಿಕ್ಯೂಷನ್ ಮತ್ತು ಪ್ರತಿವಾದದ ಅಂತಿಮ ವಾದಗಳಿಗಾಗಿ ಪ್ರಕರಣವನ್ನು ಮುಂಡೂಡಿತ್ತು.

2025ರ ಏಪ್ರಿಲ್ 19: ಪ್ರಕರಣದ ವಿಚಾರಣೆ ಮುಗಿಸಿದ್ದ ಕೋರ್ಟ್‌, ಮೇ 8ರಂದು ಕೋರ್ಟ್‌ನಲ್ಲಿ ಹಾಜರಿರುವಂತೆ ಆರೋಪಿಗಳಿಗೆ ಸೂಚಿಸಿತ್ತು. ನ್ಯಾಯಾಧೀಶರಾದ ಎ.ಕೆ.ಲಾಹೋಟಿ ಅವರು, ‘ಬೃಹತ್ ದಾಖಲೆಗಳಿದ್ದು, ತೀರ್ಪು ಪ್ರಕಟಿಸಲು ಹೆಚ್ಚಿನ ಸಮಯ ಬೇಕು. ಜುಲೈ 31ರಂದು ಎಲ್ಲ ಆರೋಪಿಗಳು ಹಾಜರಿರಬೇಕು’ ಎಂದು ಆರೋಪಿಗಳಿಗೆ ತಿಳಿಸಿದ್ದರು.

2025ರ ಜುಲೈ 31: ಸಮರ್ಪಕವಾದ ಹಾಗೂ ನಂಬಲರ್ಹ ಸಾಕ್ಷ್ಯಗಳಿಲ್ಲದ ಕಾರಣ ಆನುಮಾನಕ್ಕೆ ಆಸ್ಪದವಿಲ್ಲದಂತೆ ಪ್ರಕರಣದಲ್ಲಿ ಆರೋಪಿಗಳ ಪಾತ್ರವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಪ್ರಕರಣಗಳ ವಿಚಾರಣೆಗೆ ನಿಯೋಜನೆಗೊಂಡಿರುವ ವಿಶೇಷ ನ್ಯಾಯಾಧೀಶ ಎ.ಕೆ. ಲಾಹೋಟಿ ಅವರು, ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ 7 ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.