ಮುಂಬೈ: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್,‘ಎನ್‌ಐಎ ಕೋರ್ಟ್ ಸಂತ್ರಸ್ತರ ಕುಟುಂಬದವರನ್ನು ಸಾಕ್ಷಿಗಳಾಗಿ ಪರಿಗಣಿಸಿ, ಅವರನ್ನು ಪರೀಕ್ಷೆಗೆ ಒಳಪಡಿಸಿದ್ದರ ಕುರಿತ ವಿವರಗಳನ್ನು ಸಲ್ಲಿಸುವಂತೆ’ ಮಂಗಳವಾರ ಸೂಚಿಸಿದೆ.
ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ, ಸ್ಫೋಟದಲ್ಲಿ ಮೃತಪಟ್ಟ 6 ಜನರ ಕುಟುಂಬಗಳ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಶ್ರೀ ಚಂದ್ರಶೇಖರ ಹಾಗೂ ನ್ಯಾಯಮೂರ್ತಿ ಗೌತಮ ಅಂಖಡ ಅವರು ಇದ್ದ ನ್ಯಾಯಪೀಠ ನಡೆಸಿತು.
ಸಂತ್ರಸ್ತರ ಕುಟುಂಬದ ಸದಸ್ಯರು ಜಮಿಯಾತ್ ಉಲೇಮಾ ಮಹಾರಾಷ್ಟ್ರ(ಅರ್ಷದ್ ಮದನಿ) ಕಾನೂನು ನೆರವು ಸಮಿತಿ ಮೂಲಕ ಈ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
‘ಮೊದಲನೇ ಮೇಲ್ಮನವಿದಾರನ (ನಿಸಾರ್ ಅಹ್ಮದ್) ಪುತ್ರ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಆದರೆ, ಪ್ರಕರಣದ ವಿಚಾರಣೆ ವೇಳೆ ನಿಸಾರ್ ಅಹ್ಮದ್ ಅವರನ್ನು ಸಾಕ್ಷಿಯನ್ನಾಗಿ ಮಾಡಿರಲಿಲ್ಲ. ಪ್ರಕರಣ ಕುರಿತ ವಿವರಗಳನ್ನು ಅವರು ಬುಧವಾರ ಸಲ್ಲಿಸುವರು’ ಎಂದು ನಿಸಾರ್ ಅಹ್ಮದ್ ಪರ ವಕೀಲರು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಮೇಲ್ಮನವಿದಾರನ ಪುತ್ರ ಸ್ಫೋಟದಲ್ಲಿ ಮೃತಪಟ್ಟಿದ್ದಲ್ಲಿ, ಅವರು (ನಿಸಾರ್ ಅಹ್ಮದ್) ಸಾಕ್ಷಿಯಾಗಬೇಕಿತ್ತು. ಅವರನ್ನು ಸಾಕ್ಷಿಗಳನ್ನಾಗಿ ಮಾಡಲಾಗಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ನೀವೆಲ್ಲಾ (ಉಳಿದ ಮೇಲ್ಮನವಿದಾರರು) ತಿಳಿಸಬೇಕು’ ಎಂದು ಹೇಳಿತು.
ಅಲ್ಲದೇ, ‘ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಪ್ರತಿಯೊಬ್ಬರೂ ಮೇಲ್ಮನವಿ ಸಲ್ಲಿಸುವುದಕ್ಕೆ ಮುಕ್ತ ಅವಕಾಶ ಸಾಧ್ಯ ಇಲ್ಲ ಎಂದೂ ಪೀಠ ಹೇಳಿತು.
2008ರ ಸೆಪ್ಟೆಂಬರ್ 29ರಂದು ಮಾಲೇಗಾಂವ್‌ನಲ್ಲಿ ಮಸೀದಿಯೊಂದರ ಬಳಿ ನಿಲ್ಲಿಸಿದ್ದ ಬೈಕ್‌ನಲ್ಲಿ ಅಳವಡಿಸಿದ್ದ ಸಾಧನವೊಂದು ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ 6 ಮಂದಿ ಮೃತಪಟ್ಟು ಇತರ 101 ಜನರು ಗಾಯಗೊಂಡಿದ್ದರು.
ಸುದೀರ್ಘ ವಿಚಾರಣೆ ಬಳಿಕ, ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ (ಈಗ ನಿವೃತ್ತ) ಸೇರಿ ಎಲ್ಲ 7 ಜನ ಆರೋಪಿಗಳನ್ನು ದೋಷಮುಕ್ತಗೊಳಿಸಿ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಭಯ ಲಾಹೋಟಿ ಅವರು ಜುಲೈ 31ರಂದು ಆದೇಶಿಸಿದ್ದರು.
ಮೇಲ್ಮನವಿದಾರರ ವಾದವೇನು?
* ತಪ್ಪಾದ ತನಿಖೆ ಅಥವಾ ತನಿಖೆಯಲ್ಲಿನ ನ್ಯೂನತೆಗಳು ಆರೋಪಿಗಳನ್ನು ಖುಲಾಸೆ ಮಾಡುವುದಕ್ಕೆ ಆಧಾರವಾಗುವುದಿಲ್ಲ
* ಸ್ಫೋಟ ಕುರಿತು ರಹಸ್ಯವಾಗಿ ಸಂಚು ರೂಪಿಸಲಾಗಿತ್ತು. ಹೀಗಾಗಿ ಈ ಪ್ರಕರಣದಲ್ಲಿ ನೇರ ಸಾಕ್ಷ್ಯಗಳು ಇರಲು ಸಾಧ್ಯ ಇಲ್ಲ
* ವಿಚಾರಣಾ ನ್ಯಾಯಾಲಯವು ‘ಅಂಚೆ ಪೇದೆ ಇಲ್ಲವೇ ಮೂಕ ಪ್ರೇಕ್ಷಕ’ನಂತೆ ವರ್ತಿಸಿದೆ. ಪ್ರಾಸಿಕ್ಯೂಷನ್‌ನ ನ್ಯೂನತೆಗಳ ಲಾಭವನ್ನು ಆರೋಪಿಗಳಿಗೆ ಸಿಗುವಂತೆ ಮಾಡಿರುವುದು ದುರದೃಷ್ಟಕರ
* ಎನ್‌ಐಎ ತನಿಖೆ ಕೈಗೆತ್ತಿಕೊಂಡ ಬಳಿಕ ಆರೋಪಿಗಳ ವಿರುದ್ಧದ ಆಪಾದನೆಗಳನ್ನು ದುರ್ಬಲಗೊಳಿಸಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.