ADVERTISEMENT

BJPಯ ಜಾತಿವಾದಿ, ದಲಿತ ವಿರೋಧಿ ಮನಸ್ಥಿತಿಯ ಪ್ರತೀಕ: ಶಾ ಹೇಳಿಕೆಗೆ ಮಮತಾ ಕಿಡಿ

ಪಿಟಿಐ
Published 18 ಡಿಸೆಂಬರ್ 2024, 10:01 IST
Last Updated 18 ಡಿಸೆಂಬರ್ 2024, 10:01 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

– ಪಿಟಿಐ ಚಿತ್ರ

ಕೋಲ್ಕತ್ತ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ. ಇದು ಬಿಜೆಪಿಯ ಜಾತಿವಾದಿ ಹಾಗೂ ದಲಿತ ವಿರೋಧಿ ಮಾನಸಿಕತೆಯ ಪ್ರತೀಕ ಎಂದು ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಅಮಿತ್ ಶಾ ಅವರ ಹೇಳಿಕೆಯು ಆಕ್ಷೇಪಾರ್ಹ ಎಂದಿರುವ ಅವರು, ಅಂಬೇಡ್ಕರ್ ಅವರನ್ನು ಮಾರ್ಗದರ್ಶಕ ಹಾಗೂ ಸ್ಪೂರ್ತಿಯನ್ನಾಗಿಸಿಕೊಂಡ ಲಕ್ಷಾಂತರ ಜನರಿಗೆ ಮಾಡಿದ ಅವಮಾನ ಇದು’ ಎಂದಿದ್ದಾರೆ.

‘ಮುಖವಾಡ ಕಳಚಿ ಬಿದ್ದಿದೆ. ಸಂಸತ್ತು, ಭಾರತ ಸಂವಿಧಾನದ 75 ವರ್ಷಗಳ ವೈಭವಯುತ ‍ಪ್ರಯಾಣದ ಬಗ್ಗೆ ಚರ್ಚೆ ಮಾಡುತ್ತಿರುವಾಗ, ಗೃಹ ಸಚಿವ ಅಮಿತ್‌ ಶಾ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ಆ ಸಂದರ್ಭವನ್ನು ಕಳಂಕಗೊಳಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇದು ಬಿಜೆಪಿಯ ಜಾತಿವಾದಿ ಹಾಗೂ ದಲಿತ ವಿರೋಧಿ ಮನಸ್ಥಿತಿಯ ಪ್ರತಿಫಲನ. 240 ಸೀಟುಗಳಿಗೆ ಇಳಿದ ಬಳಿಕ ಅವರ ನಡವಳಿಕೆ ಈ ರೀತಿ ಇದ್ದರೆ, ಒಂದು ವೇಳೆ 400 ಸೀಟುಗಳಲ್ಲಿ ಗೆಲವು ಸಾಧಿಸಿದ್ದರೆ ಹೇಗಿರುತ್ತಿತ್ತು. ಡಾ. ಅಂಬೇಡ್ಕರ್ ಅವರ ಕೊಡುಗೆಗಳನ್ನು ಅಳಿಸಿ ಹಾಕಲು ಅವರು ಇಡೀ ಇತಿಹಾಸವನ್ನೇ ತಿರುಚಿದ್ದಾರೆ’ ಎಂದು ಹೇಳಿದ್ದಾರೆ.

‘ಆಂತರಿಕವಾಗಿ ದ್ವೇಷ ಹಾಗೂ ಧರ್ಮಾಂಧತೆ ತುಂಬಿರುವ ಪಕ್ಷದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.

‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಪಿತಾಮಹ. ಈ ಅತಿರೇಕದ ಮಾತುಗಳು, ಅಂಬೇಡ್ಕರ್ ವಿರುದ್ಧದ ದಾಳಿ ಮಾತ್ರವಲ್ಲ, ಎಲ್ಲಾ ಧರ್ಮ, ಜಾತಿಯ ಸದಸ್ಯರಿದ್ದ ಸಂವಿಧಾನ ರಚನಾ ಸಮಿತಿಯ ಎಲ್ಲಾ ಸದಸ್ಯರ ಮೇಲಿನ ಆಕ್ರಮಣ’ ಎಂದು ಕಿಡಿ ಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.