ಮಮತಾ ಬ್ಯಾನರ್ಜಿ
ಕೃಪೆ: ಪಿಟಿಐ
ಕೋಲ್ಕತ್ತ: ಕ್ರಿಮಿನಲ್ ಆರೋಪದ ಮೇಲೆ ಬಂಧಿತರಾದ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳನ್ನು ಪದಚ್ಯುತಗೊಳಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಖಂಡಿಸಿದ್ದಾರೆ. ಇದು ಭಾರತದಲ್ಲಿ ಪ್ರಜಾಪ್ರಭುತ್ವ ಯುಗವನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ ಎಂದು ಆರೋಪಿಸಿದ್ದಾರೆ.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ತಿದ್ದುಪಡಿ ಮಸೂದೆಯು ತುರ್ತು ಪರಿಸ್ಥಿತಿಗಿಂತ ದೊಡ್ಡದಾಗಿದೆ ಮತ್ತು ದೇಶದ ನ್ಯಾಯಾಂಗದ ಸ್ವಾತಂತ್ರ್ಯವನ್ನು ಅಂತ್ಯಗೊಳಿಸುತ್ತದೆ ಎಂದು ಹೇಳಿದ್ದಾರೆ.
ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಬಂಧಿಸಲ್ಪಟ್ಟ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳನ್ನು 30 ದಿನಗಳ ಕಾಲ ಪದಚ್ಯುತಗೊಳಿಸುವ ಮೂರು ಮಸೂದೆಗಳನ್ನು ಕೇಂದ್ರ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಬಳಿಕ, ಈ ಕರಡು ಮಸೂದೆಗಳನ್ನು ಸಂಸತ್ತಿನ ಜಂಟಿ ಸಮಿತಿಗೆ ಒಪ್ಪಿಸಲಾಗಿದೆ.
‘130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ನಾನು ಖಂಡಿಸುತ್ತೇನೆ. ಇದು ತುರ್ತು ಪರಿಸ್ಥಿತಿಯನ್ನೂ ಮೀರಿದ್ದಾಗಿದೆ. ಭಾರತದ ಪ್ರಜಾಪ್ರಭುತ್ವ ಯುಗವನ್ನು ಶಾಶ್ವತವಾಗಿ ಕೊನೆಗೊಳಿಸುವ ಒಂದು ಹೆಜ್ಜೆಯಾಗಿದೆ ಎಂದು ನಾನು ಖಂಡಿಸುತ್ತೇನೆ. ಈ ಕಠಿಣ ಹೆಜ್ಜೆ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಅಂತ್ಯಕಾಲವಾಗಿದೆ’ ಎಂದಿದ್ದಾರೆ.
ಪ್ರಜಾಪ್ರಭುತ್ವವನ್ನು ಉಳಿಸಲು ಯಾವುದೇ ಬೆಲೆ ತೆತ್ತಾದರೂ ಮಸೂದೆಯನ್ನು ವಿರೋಧಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
'ಈ ಮಸೂದೆಯನ್ನು ಜನಾದೇಶದ ಮೇಲೆ ಹಸ್ತಕ್ಷೇಪ ಮಾಡಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಸಂಸ್ಥೆಗಳ ಚುನಾಯಿತವಲ್ಲದ ಅಧಿಕಾರಿಗಳಿಗೆ ಚುನಾಯಿತ ರಾಜ್ಯ ಸರ್ಕಾರಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಲು ವ್ಯಾಪಕ ಅಧಿಕಾರವನ್ನು ಹಸ್ತಾಂತರಿಸಲು ಕೇಂದ್ರ ಸರ್ಕಾರವನ್ನು ಸಬಲೀಕರಣಗೊಳಿಸಲು ರಚಿಸಲಾಗಿದೆ’ಎಂದು ಮಮತಾ ದೂರಿದ್ದಾರೆ.
ನಮ್ಮ ಸಂವಿಧಾನದ ಮೂಲ ತತ್ವಗಳನ್ನು ಬಲಿಕೊಟ್ಟು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ದುಷ್ಟ ಮಾರ್ಗದಲ್ಲಿ ಅಧಿಕಾರ ನೀಡುವ ಒಂದು ಹೆಜ್ಜೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಅವರ ನ್ಯಾಯಾಲಯಗಳು, ಅವರ ಹಕ್ಕುಗಳು ಮತ್ತು ಅವರ ಪ್ರಜಾಪ್ರಭುತ್ವವನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಜನರು ಕ್ಷಮಿಸುವುದಿಲ್ಲ’ಎಂದಿದ್ದಾರೆ.
'ಒಬ್ಬ ವ್ಯಕ್ತಿ, ಒಂದು ಪಕ್ಷ, ಒಂದು ಸರ್ಕಾರ' ಎಂಬ ವ್ಯವಸ್ಥೆಯನ್ನು ರೂಪಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.