ADVERTISEMENT

ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಘೋಷಿಸಲು ನಿರ್ಧರಿಸಿದ್ದೇವೆ: ಮಮತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2022, 12:43 IST
Last Updated 15 ಜೂನ್ 2022, 12:43 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ನವದೆಹಲಿ: ‘ರಾಷ್ಟ್ರಪತಿ ಚುನಾವಣೆಗೆ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಪ್ರತಿಪಕ್ಷಗಳು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿವೆ. ಆದರೆ, ಪವಾರ್ ಅವರು ತಮ್ಮ ಮುಂದಿರುವ ಆಯ್ಕೆಯನ್ನು ತಿರಸ್ಕರಿಸಿದರು’ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳ ನಾಯಕರ ಜತೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

‘ಅನೇಕ ರಾಜಕೀಯ ಪಕ್ಷಗಳು ಇಂದು ಇಲ್ಲಿ ಸೇರಿವೆ. ನಾವೆಲ್ಲ ಸೇರಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಿದ್ದೇವೆ. ಪ್ರತಿಯೊಬ್ಬರೂ ಆ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ. ಇತರರ ಜತೆಗೂ ನಾವು ಚರ್ಚೆ ನಡೆಸಲಿದ್ದೇವೆ. ಇದು ಒಂದು ಉತ್ತಮ ಆರಂಭ. ಅನೇಕ ತಿಂಗಳುಗಳ ಬಳಿಕ ನಾವೆಲ್ಲ ಜತೆಯಾಗಿ ಕುಳಿತು ಮಾತುಕತೆ ನಡೆಸಿದ್ದೇವೆ. ಇನ್ನೊಮ್ಮೆ ನಾವು ಜತೆಸೇರಲಿದ್ದೇವೆ’ ಎಂದು ಮಮತಾ ಹೇಳಿದ್ದಾರೆ.

ಪ್ರತಿಪಕ್ಷಗಳಾದ ಕಾಂಗ್ರೆಸ್, ಶಿವಸೇನಾ, ಎನ್‌ಸಿಪಿ, ಆರ್‌ಜೆಡಿ, ಎಸ್‌ಪಿ, ಜೆಡಿಎಸ್‌, ಸಿಪಿಐ, ಆರ್‌ಎಸ್‌ಪಿ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿಎಸ್‌, ಡಿಎಂಕೆ, ಆರ್‌ಎಲ್‌ಡಿ ಹಾಗೂ ಜೆಎಂಎಂ ಸೇರಿದಂತೆ 17 ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸಿವೆ. ಆದರೆ, ಟಿಆರ್‌ಎಸ್‌, ಎಎಪಿ, ಅಕಾಲಿದಳ ಹಾಗೂ ಬಿಜೆಡಿ ಪಕ್ಷಗಳು ಗೈರಾಗಿವೆ. ಕಾಂಗ್ರೆಸ್ ಜೊತೆ ವೇದಿಕೆ ಹಂಚಿಕೊಳ್ಳಲು ಟಿಆರ್‌ಎಸ್ ಸಮ್ಮತಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.