ADVERTISEMENT

‘ಮಮತಾ ಬ್ಯಾನರ್ಜಿ ಝಾನ್ಸಿ ರಾಣಿಯಲ್ಲ; ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್’

ಗಿರಿರಾಜ್‌ ಸಿಂಗ್ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 11:51 IST
Last Updated 8 ಫೆಬ್ರುವರಿ 2019, 11:51 IST
   

ನವದೆಹಲಿ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಧುನಿಕ ಝಾನ್ಸಿ ರಾಣಿ ಎಂದಿದ್ದ ತೃಣ ಮೂಲ ಕಾಂಗ್ರೆಸ್‌ ಪಕ್ಷದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್, ಮಮತಾ ಅವರನ್ನು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರಿಗೆ ಹೋಲಿಕೆ ಮಾಡಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಬ್ರಿಟಿಷರ ಆಡಳಿತ ಕಾಲದ ಭಾರತವನ್ನು ಹೋಲಿಸಿ ಲೋಕಸಭೆಯಲ್ಲಿ ಗುರುವಾರ ಮಾತನಾಡಿದ್ದ ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕ ದಿನೇಶ್‌ ತ್ರಿವೇದಿ, ಮಮತಾ ಬ್ಯಾನರ್ಜಿ ಈ ಕಾಲದ ‘ಝಾನ್ಸಿ ರಾಣಿ’ ಎಂದಿದ್ದರು.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗಿರಿರಾಜ್‌ ಸಿಂಗ್‌, ‘ಬಹುಶ: ಇದು ಝಾನ್ಸಿ ರಾಣಿ ಬಗೆಗಿನ ನಿಂದನಾತ್ಮಕ ಹೇಳಿಕೆಯಾಗಬಹುದು. ಮಮತಾ ಇಡೀ ಪಶ್ಚಿಮ ಬಂಗಾಳವನ್ನು ಹಾಳು ಮಾಡಿದ ರಾಕ್ಷಸಿ ಎನಿಸಬಹುದು. ಆಕೆ ತನ್ನ ವಿರುದ್ಧ ಮಾತನಾಡುವವರನ್ನು ಮುಗಿಸುವ ಕಿಮ್‌ ಜಾಂಗ್‌ ಉನ್‌ ರೀತಿ ಆಗಬಹುದು’ ಎಂದು ಟೀಕಿಸಿದ್ದಾರೆ.

ADVERTISEMENT

‘ಝಾನ್ಸಿ ರಾಣಿ ಅಥವಾ ಪದ್ಮಾವತಿಯವರಂತಾಗುವ ಶಕ್ತಿ ಮಮತಾಗಿಲ್ಲ. ಝಾನ್ಸಿ ರಾಣಿ ದೇಶಕ್ಕಾಗಿ ಹೋರಾಡಿದವರು. ದೇಶದೊಳಕ್ಕೆ ನುಸುಳುತ್ತಿರುವ ರೋಹಿಂಗ್ಯಾಗಳನ್ನು ಬೆಂಬಲಿಸುವ ಮಮತಾ, ದೇಶ ಒಡೆಯಲು ಹೋರಾಟ ನಡೆಸುತ್ತಿದ್ದಾರೆ’ ಎಂದು ದೂರಿದರು.

ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸಲು ಯತ್ನಿಸಿದ್ದನ್ನು ಖಂಡಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾನುವಾರ ತಡರಾತ್ರಿ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ಕಮಿಷನರ್‌ ನಿವಾಸಕ್ಕೆ ತೆರಳಲು ಸಿಬಿಐ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಬಳಿಕ ಈ ವಿಚಾರ ರಾಷ್ಟ್ರದ ಗಮನ ಸೆಳೆದಿತ್ತು.

ಸಂಬಂಧಪಟ್ಟ ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.