ADVERTISEMENT

ಮುಂಬೈ ವಿಮಾನ ನಿಲ್ದಾಣದಲ್ಲಿ ಜಗಳ: ಬಾನೆಟ್‌ ಮೇಲೆ ಎಳೆದೊಯ್ದ ಚಾಲಕ

ಪಿಟಿಐ
Published 28 ಮೇ 2025, 14:45 IST
Last Updated 28 ಮೇ 2025, 14:45 IST
   

ಮುಂಬೈ: ಜಾಗ ಬಿಡುವಂತೆ ಕೇಳಿಕೊಂಡ ಖಾಸಗಿ ಕ್ಯಾಬ್‌ನ ಚಾಲಕನನ್ನು ಇಲ್ಲಿನ ವಿಲೆ ಪಾರ್ಲೆ ವಿಮಾನ ನಿಲ್ದಾಣದಿಂದ 6 ಕಿ.ಮೀ. ದೂರದವರೆಗೆ ಎರ್ಟಿಗಾ ಕಾರಿನ ಬಾನೆಟ್‌ ಮೇಲೆ ಮಂಗಳವಾರ ರಾತ್ರಿ ಎಳೆದೊಯ್ಯಲಾಗಿದೆ.

ಎರ್ಟಿಗಾ ಕಾರಿನ ಚಾಲಕನು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಮತ್ತೊಬ್ಬರಿಗಾಗಿ ಕಾಯುತ್ತಿದ್ದ. ಈ ವೇಳೆ ಖಾಸಗಿ ಕ್ಯಾಬ್‌ನ ಚಾಲಕನು ಜಾಗ ಬಿಡುವಂತೆ ಕೇಳಿಕೊಂಡ. ಇದು ಇಬ್ಬರ ನಡುವೆ ಜಗಳ ಶುರುವಾಗಲು ಕಾರಣವಾಗಿದೆ ಎಂದು ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಕಾರು ಚಾಲಕರಿಬ್ಬರ ನಡುವಿನ ಜಗಳ ತಾರಕಕ್ಕೇರುತ್ತಿದ್ದಂತೆ, ಖಾಸಗಿ ಕ್ಯಾಬ್‌ ಚಾಲಕರು ತಮ್ಮ ಜೊತೆಗಾರನ ಬೆಂಬಲಕ್ಕೆ ಜಮಾಯಿಸಿದ್ದಾರೆ. ಹೆಚ್ಚಿನ ಜನರು ಸೇರಿದ್ದರಿಂದ ಗಾಬರಿಗೊಂಡ ಎರ್ಟಿಗಾ ಕಾರಿನ ಚಾಲಕ ತಕ್ಷಣವೇ ವೇಗವಾಗಿ ತನ್ನ ವಾಹನ ಚಲಾಯಿಸಲು ಮುಂದಾಗಿದ್ದಾನೆ.

ADVERTISEMENT

ಕ್ಯಾಬ್‌ ಚಾಲಕನು ಎರ್ಟಿಗಾ ಕಾರಿಗೆ ಅಡ್ಡವಾಗಿ ಹೋಗಲು ಯತ್ನಿಸಿದ. ಸಾಧ್ಯವಾಗದಿದ್ದರಿಂದ ಬಾನೆಟ್‌ ಮೇಲೆ ಜಿಗಿದ. ಇದನ್ನು ಲೆಕ್ಕಿಸದ ಎರ್ಟಿಗಾ ಚಾಲಕನು ಮುಂಬೈನ ರಸ್ತೆಗಳಲ್ಲಿ 6 ಕಿ.ಮೀ. ವೇಗವಾಗಿ ಸಂಚರಿಸಿದ ಬಳಿಕ, ಜೋಗೇಶ್ವರಿ ಬಳಿ ನಿಲ್ಲಿಸಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.