ADVERTISEMENT

ವಾಟರ್‌ ಪ್ಯೂರಿಫೈಯರ್‌ ದುರಸ್ತಿಗೆ ಟೋಲ್‌ ಫ್ರೀ ಸಂಖ್ಯೆ ಬಳಸುವ ಮುನ್ನ...

ಪಿಟಿಐ
Published 28 ಆಗಸ್ಟ್ 2025, 5:13 IST
Last Updated 28 ಆಗಸ್ಟ್ 2025, 5:13 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪತ್ತನಂತಿಟ್ಟ: ಮನೆಯಲ್ಲಿ ಬಳಸುವ ನೀರು ಶುದ್ಧೀಕರಿಸುವ ಯಂತ್ರದ ದುರಸ್ತಿಗಾಗಿ ಆನ್‌ಲೈನ್‌ನಲ್ಲಿ ದೊರೆತ ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿದ ಕೇರಳದ 52 ವರ್ಷದ ವ್ಯಕ್ತಿ, ಬರೋಬ್ಬರಿ ₹95 ಸಾವಿರ ಕಳೆದುಕೊಂಡಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ. 23ರಂದು ಈ ಘಟನೆ ನಡೆದಿದೆ. ನೀರು ಶುದ್ಧೀಕರಿಸುವ ಯಂತ್ರದ ದುರಸ್ತಿಗಾಗಿ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದಾಗ ಸಿಕ್ಕ ಟೋಲ್‌ ಫ್ರೀ ಸಂಖ್ಯೆ ನಕಲಿ ಎಂದು ತಿಳಿಯುವ ಹೊತ್ತಿಗೆ ಸಾಕಷ್ಟು ಹಣವನ್ನು ಕಳೆದುಕೊಂಡಿರುವುದಾಗಿ ಈ ವ್ಯಕ್ತಿ ತಿಳಿಸಿದ್ದಾರೆ.

ADVERTISEMENT

‘ಆನ್‌ಲೈನ್‌ನಲ್ಲಿ ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿದಾಗ ತಮ್ಮ ಕಂಪನಿಯ ಪ್ರತಿನಿಧಿ ಸಂಪರ್ಕಿಸುವುದಾಗಿ ಹೇಳಿದ್ದರು. ಕೆಲ ದಿನಗಳ ನಂತರ ಆ ವ್ಯಕ್ತಿ ಕರೆ ಮಾಡಿದ. ತನ್ನನ್ನು ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ. ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಹೇಳಿದರು. ಅದಕ್ಕಾಗಿ ಒಂದು ಲಿಂಕ್ ಅನ್ನೂ ಕಳುಹಿಸಿದರು. ಇನ್‌ಸ್ಟಾಲ್‌ ಆಗುತ್ತಿದ್ದಂತೆ, ಅನಧಿಕೃತ ಯುಪಿಐ ಕ್ರಿಯಾಶೀಲವಾಗಿ, ಖಾತೆಯಲ್ಲಿದ್ದ ₹95 ಸಾವಿರವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ’ ಎಂದು ಪೊಲೀಸರು ವಿವರಿಸಿದ್ದಾರೆ.

ಇದಕ್ಕಾಗಿ ಬಳಸಿದ ಟೋಲ್ ಫ್ರೀ ಸಂಖ್ಯೆ ನಕಲಿ ಮತ್ತು ಸೈಬರ್ ವಂಚಕರು ಬಳಸಿದ್ದು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪತ್ತನಂತಿಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ನೋಂದಾಯಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

‘ನಕಲಿ ಗ್ರಾಹಕರ ಆರೈಕೆ ಕೇಂದ್ರದ ಸಂಖ್ಯೆಗಳನ್ನು ಬಳಸಿ ಹಣ ದೋಚಿದ ಬಹಳಷ್ಟು ಪ್ರಕರಣಗಳು ದೇಶದಲ್ಲಿ ನಡೆದಿವೆ. ಕಂಪನಿಯ ಅಧಿಕೃತ ಅಂತರ್ಜಾಲ ಪುಟದಿಂದಲೇ ಟೋಲ್ ಫ್ರೀ ಸಂಖ್ಯೆಯನ್ನು ಗ್ರಾಹಕರು ಪಡೆದು, ನೆರವು ಕೇಳಬೇಕು. ಅದರಲ್ಲೂ ಹಬ್ಬದ ಈ ಸಂದರ್ಭದಲ್ಲಿ ಮಾರಾಟ ಪ್ರಕ್ರಿಯೆ ಹೆಚ್ಚಳವಾಗಿದೆ. ಇಂಥ ಸಂದರ್ಭಕ್ಕಾಗಿಯೇ ವಂಚಕರು ಹೊಂಚುಹಾಕುತ್ತಿರುತ್ತಾರೆ. ಹೀಗಾಗಿ ಗ್ರಾಹಕರು ಹೆಚ್ಚು ಜಾಗರೂಕರಾಗಿ ಆನ್‌ಲೈನ್‌ ವ್ಯವಹಾರ ನಡೆಸಬೇಕು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.