ಸಾವು (ಪ್ರಾತಿನಿಧಿಕ ಚಿತ್ರ)
ಮಂಡ್ಲ: ಮಧ್ಯ ಪ್ರದೇಶದ ಮಂಡ್ಲ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಎನ್‌ಕೌಂಟರ್‌ಗೆ ಬಲಿಯಾದ ವ್ಯಕ್ತಿ ಮಾವೋವಾದಿ ಅಲ್ಲ, ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮಾಯಕ ವ್ಯಕ್ತಿಯನ್ನು ಕೊಲ್ಲಲಾಗಿದ್ದು, ಉನ್ನತ ಮಟ್ಟದ ಹಾಗೂ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.
ಅತಿ ಹಿಂದುಳಿದ ಬುಡಕಟ್ಟು ಜನಾಂಗ ಬೈಗಾ ಸಮುದಾಯಕ್ಕೆ ಸೇರಿದ ಸಿಂಗ್ ಪಾರ್ಥ (38) ಎಂಬವರು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಸಾವಿಗೀಡಾದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 9 ರಂದು ಎನ್‌ಕೌಂಟರ್ ನಡೆದಿತ್ತು. ಸಿಂಗ್ ಪಾರ್ಥ ಅವರ ಗುರುತು ಮಾರ್ಚ್ 13ರಂದು ಪತ್ತೆಯಾಗಿತ್ತು.
ಪಾರ್ಥ ಅವರು ಜಿಲ್ಲೆಯ ಖತಿಯಾ ಪ್ರದೇಶದ ದಟ್ಟಾರಣ್ಯದಲ್ಲಿ ನಕ್ಸಲಿಯರ ಜೊತೆಗಿದ್ದರು ಎಂದು ಬಾಲಾಘಾಟ್ ವಲಯದ ಇನ್‌ಸ್ಪೆಕ್ಟರ್ ಜನರಲ್ ಸಂಜಯ್ ಕುಮಾರ್ ತಿಳಿಸಿದ್ದಾರೆ.
‘ಅವರು ಮಾವೋವಾದಿಗಳೊಂದಿಗೆ ಇರಲು ಹೇಗೆ ಸಾಧ್ಯ? ಇದು ತನಿಖೆ ಮಾಡಬೇಕಾದ ವಿಷಯ. ನಕ್ಸಲರು ಬುಡಕಟ್ಟು ಜನರೊಂದಿಗೆ ಸಂಚರಿಸುತ್ತಾರೆ. ಅವರಿಗೆ ನಕ್ಸಲರೊಂದಿಗೆ ನಂಟು ಇದೆಯೋ ಇಲ್ಲವೋ ಎಂದು ತನಿಖೆಯ ಬಳಿಕವೇ ಗೊತ್ತಾಗಬೇಕಿದೆ’ ಎಂದು ಕುಮಾರ್ ಹೇಳಿದ್ದಾರೆ.
‘ಅವರು ಮಾವೋವಾದಿ ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಅವರು ಲಾಸರ ತೋಲ ಗ್ರಾಮದ ನಿವಾಸಿ. ಎನ್‌ಕೌಂಟರ್ ಬಳಿಕ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಏತನ್ಮಧ್ಯೆ, ಬುಡಕಟ್ಟು ಪ್ರಾಬಲ್ಯವಿರುವ ಮಂಡ್ಲಾ ಜಿಲ್ಲೆಯ ಬಿಚಿಯಾ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕ ನಾರಾಯಣ್ ಸಿಂಗ್ ಪಟ್ಟಾ ಅವರು ಶನಿವಾರ ಪಾರ್ಥ ಅವರ ಗ್ರಾಮಕ್ಕೆ ತೆರಳಿ, ಮಕ್ಕಳು ಮತ್ತು ಇತರ ನಿವಾಸಿಗಳನ್ನು ಭೇಟಿಯಾಗಿದ್ದಾರೆ.
‘ನಾನು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಲ್ಲಿದ್ದೆ. ಆದರೆ ಪಾರ್ಥ ಅವರ ಪತ್ನಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಭೇಟಿಯಾಗಲು ಪೊಲೀಸರು ಬಿಡಲಿಲ್ಲ. ಅವರು ಪೊಲೀಸ್ ಠಾಣೆಯಲ್ಲಿ ಇರುವುದಾಗಿ ನನಗೆ ತಿಳಿಸಿದರು’ ಎಂದು ಅವರು ಹೇಳಿದ್ದಾರೆ.
ಮೃತ ಪಾರ್ಥ ಐದು ಮಕ್ಕಳ ತಂದೆ. ಅವರು ಅಮಾಯಕ ವ್ಯಕ್ತಿ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪಟ್ಟಾ ಹೇಳಿದ್ದಾರೆ.
ಮಾವೋವಾದಿಗಳು ಯಾರೆಂದು ಪಾರ್ಥಗೆ ತಿಳಿದಿಲ್ಲ. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಗಿಳಿಗಳನ್ನು ಹಿಡಿಯಲು ಕಾಡಿಗೆ ಹೋಗುತ್ತಿದ್ದರು ಎಂದು ನನಗೆ ಗೊತ್ತಾಗಿದೆ. ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ಮತ್ತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.