ADVERTISEMENT

ಅಂಬಾನಿ ನಿವಾಸದ ಬಳಿ ಸ್ಫೋಟಕ ಪ್ರಕರಣ: ಎಸ್‌ಯುವಿ ಮಾಲೀಕನ ಮೃತದೇಹ ಪತ್ತೆ

ಮೃತ್ಯುಂಜಯ ಬೋಸ್
Published 5 ಮಾರ್ಚ್ 2021, 13:33 IST
Last Updated 5 ಮಾರ್ಚ್ 2021, 13:33 IST
ಅಂಬಾನಿ ಅವರ ‘ಅಂಟಿಲಿಯಾ’ ಐಷಾರಾಮಿ ನಿವಾಸದ ಹೊರಭಾಗದಲ್ಲಿ ಭದ್ರತಾ ಸಿಬ್ಬಂದಿ – ಪಿಟಿಐ ಸಂಗ್ರಹ ಚಿತ್ರ
ಅಂಬಾನಿ ಅವರ ‘ಅಂಟಿಲಿಯಾ’ ಐಷಾರಾಮಿ ನಿವಾಸದ ಹೊರಭಾಗದಲ್ಲಿ ಭದ್ರತಾ ಸಿಬ್ಬಂದಿ – ಪಿಟಿಐ ಸಂಗ್ರಹ ಚಿತ್ರ   

ಮುಂಬೈ:ಉದ್ಯಮಿ ಮುಕೇಶ್‌ ಅಂಬಾನಿ ಮನೆ ಬಳಿ ಪತ್ತೆಯಾಗಿದ್ದ ಸ್ಫೋಟಕ ತುಂಬಿದ್ದ ಎಸ್‌ಯುವಿ ಮಾಲೀಕ, ಥಾಣೆ ಮೂಲದ ಉದ್ಯಮಿ ಮನ್ಸುಖ್‌ ಹಿರೇನ್ ಅವರ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ತಮ್ಮ ಎಸ್‌ಯುವಿ ಕಳವಾಗಿತ್ತು ಎಂದು ಅವರು ಹೇಳಿಕೊಂಡಿದ್ದರು.

ಥಾಣೆ ಜಿಲ್ಲೆಯ ಮುಂಬ್ರಾದಲ್ಲಿ ಹಿರೇನ್ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಅಂಬಾನಿ ಅವರ ‘ಅಂಟಿಲಿಯಾ’ ಐಷಾರಾಮಿ ನಿವಾಸದ ಬಳಿ ಫೆಬ್ರುವರಿ 24ರ ಮಧ್ಯರಾತ್ರಿ ಜಿಲೆಟಿನ್‌ ಕಡ್ಡಿಗಳನ್ನು ತುಂಬಿದ್ದ ಎಸ್‌ಯುವಿಯನ್ನು ನಿಲ್ಲಿಸಲಾಗಿತ್ತು. ಸುಮಾರು 20 ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರ ಅದರಲ್ಲಿ ಪತ್ತೆಯಾಗಿತ್ತು.

ಈ ಮಧ್ಯೆ, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರ ಉಲ್ಲೇಖಿಸಿ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ.

ಹಿರೇನ್ ಅವರಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಸಚಿನ್ ವಾಜ್ ಅವರ ಪರಿಚಯ ಇರುವಂತಿದೆ ಎಂದೂ ಫಡಣವೀಸ್ ಹೇಳಿದ್ದಾರೆ.

‘ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು,ಅಪರಾಧ ವಿಭಾಗದಪೊಲೀಸರು ಸ್ಥಳಕ್ಕೆ ತಲುಪಿರಲಿಲ್ಲ. ಆದರೆ ಸಚಿನ್ ವಾಜ್ ಅಲ್ಲಿಗೆ ತಲುಪಿ ಕಾರು ಮತ್ತು ಅದರಲ್ಲಿದ್ದ ಪತ್ರವನ್ನು ವಶಪಡಿಸಿಕೊಂಡಿದ್ದರು’ ಎಂದೂ ಫಡಣವೀಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತರು ತನಿಖೆ ನಡೆಸುತ್ತಾರೆ ಎಂದು ಪೊಲೀಸರು ಹೇಳಿದ ಮೇಲೆ, ತನಿಖೆಯ ಹೊಣೆಯನ್ನು ವಾಜ್‌ ಅವರಿಗೆ ವಹಿಸಿದ್ದೇಕೆ ಎಂದೂ ಅವರು ಪ್ರಶ್ನಿಸಿದ್ದಾರೆ.

ಹಿರೇನ್ ಅವರಿಗೆ ಭದ್ರತೆ ಒದಗಿಸಬೇಕು ಎಂದೂ ಅವರು ಸರ್ಕಾರವನ್ನು ಒತ್ತಾಯಿಸಿದ್ದರು. ಅದಾದ ಕೆಲವೇ ನಿಮಿಷಗಳಲ್ಲಿ ಮೃತದೇಹ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಈ ಕುರಿತು ಗೃಹ ಸಚಿವ ಅನಿಲ್ ದೇಶ್‌ಮುಖ್ ಉತ್ತರ ನೀಡಬೇಕು ಎಂದು ಫಡಣವೀಸ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.