
ಮಣಿಪುರದಲ್ಲಿ ಭದ್ರತಾ ಪಡೆ
(ಪಿಟಿಐ ಸಂಗ್ರಹ ಚಿತ್ರ)
ಇಂಫಾಲ: ಮಣಿಪುರದ ತಮೆಂಗ್‌ಲೊಂಗ್ ಜಿಲ್ಲೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ನಾಗಾ ಗ್ರಾಮಗಳ ನಡುವೆ ಉಂಟಾದ ಸಂಘರ್ಷದಲ್ಲಿ 12 ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಘರ್ಷದ ಹಿನ್ನೆಲೆಯಲ್ಲಿ ತಮೆಂಗ್‌ಲೊಂಗ್ ಜಿಲ್ಲೆಯ ಕೆಲವು ಭಾಗಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಬುಧವಾರ ಸಂಜೆ ಹಳೆಯ ತಮೆಂಗ್‌ಲೊಂಗ್ ಗ್ರಾಮದ ಸುಮಾರು 2,000 ನಿವಾಸಿಗಳು ಭೂ ವಿವಾದ ಸಂಬಂಧ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಕಚೇರಿಗೆ ಮನವಿ ಸಲ್ಲಿಸುವ ನಿಟ್ಟಿನಲ್ಲಿ ರ್‍ಯಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಘರ್ಷ ಉಂಟಾಗಿದೆ.
ಈ ವೇಳೆ ದಾಯಿಲೊಂಗ್ ಗ್ರಾಮದ ನಿವಾಸಿಗಳು ರ್‍ಯಾಲಿ ಮೇಲೆ ಕಲ್ಲುತೂರಾಟ ನಡೆಸಿರುವುದು ಘರ್ಷಣೆಗೆ ಕಾರಣವಾಗಿದೆ. ಸಮೀಪದ ಡುಯಿಗೈಲೊಂಗ್ ಗ್ರಾಮದ ಜನರು ದಾಯಿಲೊಂಗ್ ಬೆಂಬಲಕ್ಕಾಗಿ ಧಾವಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ರಿಕ್ತ ಗುಂಪು ಸರ್ಕಾರಿ ಪಿಬ್ಲ್ಯುಡಿ ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಮುಂದಿನ ಸೂಚನೆವರೆಗೆ ಬಿಎನ್‌ಎಸ್‌ಎಸ್ ಸೆಕ್ಷನ್ 163 ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಈಗಿನ ಸಂಘರ್ಷಕ್ಕೂ 2023ರ ಮೇ ತಿಂಗಳಲ್ಲಿ ಆರಂಭವಾಗಿರುವ ಮೈತೇಯಿ ಹಾಗೂ ಕುಕಿ ಸಮುದಾಯದ ನಡುವಣ ಜನಾಂಗೀಯ ಸಂಘರ್ಷಕ್ಕೂ ಯಾವುದೇ ನಂಟು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.