
ಇಂಫಾಲ್/ಚುರಾಚಾಂದಪುರ: ಭದ್ರತಾ ಪಡೆಗಳು ಮಂಗಳವಾರ ಬೆಳಿಗ್ಗೆ ಇಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಂಘಟನೆಗೆ ಸೇರಿದ ನಾಲ್ಕು ಮಂದಿ ಉಗ್ರರು ಹತ್ಯೆಯಾಗಿದ್ದಾರೆ.
‘ನಿಷೇಧಿತ ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿಗೆ (ಯುಕೆಎನ್‌ಎ) ಸೇರಿದ ಶಸ್ತ್ರಸಜ್ಜಿತ ಕಾರ್ಯಕರ್ತರು ಅಡಗಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಬೆಳಿಗ್ಗೆ 5.30ರ ಸುಮಾರಿಗೆ ಜಿಲ್ಲೆಯ ಹೆಂಗ್ಲೆಪ್ ಉಪ ವಿಭಾಗದ ಖಾನ್ಪಿ ಗ್ರಾಮದಲ್ಲಿ ಕಾರ್ಯಾಚರಣೆ ಆರಂಭಿಸಿದವು. ಈ ವೇಳೆ ಎರಡು ಕಡೆಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆಯಿತು. ಹಲವು ಸುತ್ತಿನ ಗುಂಡಿನ ದಾಳಿ ಬಳಿಕ ನಾಲ್ಕು ಮಂದಿ ಉಗ್ರರು ಹತರಾಗಿದ್ದು, ಉಳಿದವರು ಸ್ಥಳದಿಂದ ಪರಾರಿಯಾದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಸ್ತ್ರಸಜ್ಜಿತ ಹೋರಾಟ ಕೊನೆಗೊಳಿಸಿ, ಶಾಂತಿ ಮಾತುಕತೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೊತೆಗಿನ ಒಪ್ಪಂದಕ್ಕೆ ಯುಕೆಎನ್‌ಎ ಸಂಘಟನೆಯೂ ಇದುವರೆಗೂ ಸಹಿಹಾಕಿಲ್ಲ.
ಕಾರ್ಯಾಚರಣೆಯೂ ಮುಂದುವರಿದಿದ್ದು, ಸುತ್ತಲಿನ ಸ್ಥಳಗಳಲ್ಲಿ ಶೋಧ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.