ADVERTISEMENT

ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ವಿಚಾರಣೆಗೆ ಸಿಬಿಐ ಕರೆ

ಪಿಟಿಐ
Published 18 ಫೆಬ್ರುವರಿ 2023, 11:28 IST
Last Updated 18 ಫೆಬ್ರುವರಿ 2023, 11:28 IST
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ   

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಸಿದ ಸುಮಾರು ಮೂರು ತಿಂಗಳ ಬಳಿಕ ಸಿಬಿಐ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭಾನುವಾರ ಮತ್ತೆ ವಿಚಾರಣೆಗೆ ಕರೆಯಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

‘ಸಿಸೋಡಿಯಾ ಮತ್ತು ಇತರ ಶಂಕಿತರ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದ್ದು, ಸಿಸೋಡಿಯಾ ಅವರನ್ನು ಚಾರ್ಜ್‌ಶೀಟ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿಲ್ಲ’ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಸಿಬಿಐ ಭಾನುವಾರ ಮತ್ತೆ ಕರೆದಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರವನ್ನು ನನ್ನ ವಿರುದ್ಧ ಸಂಪೂರ್ಣ ಬಳಸಲಾಗಿದೆ. ನನ್ನ ಮನೆ, ನನ್ನ ಬ್ಯಾಂಕ್ ಲಾಕರ್‌ ಅನ್ನೂ ಶೋಧಿಸಿದ್ದಾರೆ. ಆದರೆ, ಅವರಿಗೆ ನನ್ನ ವಿರುದ್ಧ ಏನೂ ದೊರೆತಿಲ್ಲ. ನಾನು ತನಿಖೆಗೆ ಹಿಂದೆಯೂ ಸಹಕರಿಸಿದ್ದೇನೆ. ಮುಂದೆಯೂ ಸಹಕರಿಸುತ್ತೇನೆ’ ಎಂದು ಸಿಸೋಡಿಯಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

ADVERTISEMENT

ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಮನೀಶ್ ಸಿಸೋಡಿಯಾ ಅವರು ಅಬಕಾರಿ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್‌ 17ರಂದು ವಿಚಾರಣೆ ನಡೆಸಲಾಗಿತ್ತು. ಅಷ್ಟೇ ಅಲ್ಲ ಅವರ ಮನೆ ಮತ್ತು ಬ್ಯಾಂಕ್ ಲಾಕರ್‌ಗಳನ್ನೂ ಶೋಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.