ADVERTISEMENT

ಕೇರಳ ವಿಧಾನಸಭೆಯಲ್ಲಿ ಅನುರಣಿಸಿದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಕವಿತೆ!

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 14:41 IST
Last Updated 7 ಜೂನ್ 2021, 14:41 IST
ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್‌
ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್‌    

ತಿರುವನಂತಪುರ: ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ನೂತನ ಶಾಸಕ ಎ.ಕೆ.ಎಂ. ಅಶ್ರಫ್‌ ಅವರು ಇದೀಗ ವಿಧಾನಸಭೆಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಕವನ ವಾಚಿಸಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಕೇರಳ–ಕರ್ನಾಟಕ ಗಡಿ ಪ್ರದೇಶವಾದ ಮಂಜೇಶ್ವರ ಕ್ಷೇತ್ರದಿಂದ ನಾನು ಆಯ್ಕೆಯಾಗಿ ಬಂದಿದ್ದೇನೆ. ನಮ್ಮದು ವೈವಿಧ್ಯಮಯ ಭಾಷೆ, ಕಲೆ, ಸಂಸ್ಕಾರ ಮತ್ತು ಸಂಸ್ಕೃತಿಯ ನಾಡು. ಕನ್ನಡದ ರಾಷ್ಟ್ರ ಕವಿ ಗೋವಿಂದ ಪೈಯವರು ಇದ್ದ ನಾಡು ನನ್ನದು. ಗೋವಿಂದ ಪೈಯವರ, ಅನೇಕ ಭಾಷೆಗಳಿಗೆ ಅನುವಾದಗೊಂಡಿರುವ ‘ಹೆಬ್ಬೆರಳು’ ಎಂಬ ನಾಟಕದಲ್ಲಿ ಬರುವ ಕವಿತೆಯೊಂದನ್ನು ನಾನಿಲ್ಲಿ ವಾಚಿಸುತ್ತೇನೆ’ ಎಂದು ಹೇಳಿದ್ದಾರೆ.

ಬಳಿಕ ಕವಿತೆಯ ಸಾಲುಗಳನ್ನು (ವಿಡಿಯೊದಲ್ಲಿ 1:29 ನಿಮಿಷದಿಂದ ನೋಡಿ) ಓದಿದ್ದಲ್ಲದೆ ಅದರ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ.

ಬಳಿಕ ಬಿಜೆಪಿಯ ಕೇರಳ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಮತ್ತು ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಈಚೆಗೆ ನಡೆದ ವಿಧಾನಸಭೆ ಚುನಾವಣೆಯು ನಮಗೆ ಅತಿ ಕಠಿಣವಾದ ಸವಾಲಾಗಿತ್ತು. ಮಂಜೇಶ್ವರದ ಜನ ಸುರೇಂದ್ರನ್ ಅವರನ್ನು ಮಾತ್ರ ಸೋಲಿಸಿದ್ದಲ್ಲ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿ, ಹಣ ಬಲದಿಂದ ಸರ್ಕಾರ ರಚಿಸಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಉಪ ಮುಖ್ಯಮಂತ್ರಿ ಮತ್ತು 15–16 ಮಂದಿ ಸಚಿವರನ್ನೇ ಮಂಜೇಶ್ವರದ ಜನ ಸೋಲಿಸಿದ್ದಾರೆ’ ಎಂದು ಅಶ್ರಫ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.