ADVERTISEMENT

ತ್ರಿಪುರಾ: ಬಿಜೆಪಿ–ಟಿಎಂಸಿ ಬೆಂಬಲಿಗರ ನಡುವೆ ಘರ್ಷಣೆ, 19 ಮಂದಿಗೆ ಗಾಯ

ಪಿಟಿಐ
Published 19 ನವೆಂಬರ್ 2021, 12:03 IST
Last Updated 19 ನವೆಂಬರ್ 2021, 12:03 IST
ಸಾಂದರ್ಭಿಕ ಚಿತ್ರ (ಕೃಪೆ – ಎಎಫ್‌ಪಿ)
ಸಾಂದರ್ಭಿಕ ಚಿತ್ರ (ಕೃಪೆ – ಎಎಫ್‌ಪಿ)   

ಅಗರ್ತಲ: ತ್ರಿಪುರಾದ ಖೋವಾಯಿ ಜಿಲ್ಲೆಯ ತೆಲಿಯಾಮುರಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಘರ್ಷಣೆ ನಡೆದ ಪ್ರದೇಶದಲ್ಲಿ ಸೆಕ್ಷನ್ 144 ಹೇರಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯೂ ಇದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಕೆಲವೇ ದಿನಗಳ ಮುನ್ನ ಘರ್ಷಣೆ ಸಂಭವಿಸಿದೆ.

ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತೆಲಿಯಾಮುರಾ ಮುನ್ಸಿಪಲ್ ಕೌನ್ಸಿಲ್‌ನ 13, 14 ಮತ್ತು 15ನೇ ವಾರ್ಡ್‌ಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನವೆಂಬರ್ 24ರ ವರೆಗೆ ಇದು ಜಾರಿಯಲ್ಲಿರಲಿದೆ ಎಂದು ತೆಲಿಯಾಮುರಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಎಂಡಿ ಸಜ್ಜದ್ ಪಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಬುಧವಾರ ಬೆಳಿಗ್ಗೆ 9.30ರ ಸುಮಾರಿಗೆ ಟಿಎಂಸಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಕಲಿತಿಲಾ ಪ್ರದೇಶದಲ್ಲಿ ಬಿಜೆಪಿ ಕಚೇರಿ ಬಳಿ ಸಮೀಪಿಸಿದಾಗ ಘರ್ಷಣೆ ಆರಂಭವಾಗಿತ್ತು. ಎರಡೂ ಪಕ್ಷಗಳ ಬೆಂಬಲಿಗರು ಮುಖಾಮುಖಿಯಾಗಿದ್ದು, ವಾಗ್ವಾದಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಟಿಎಂಸಿ ಬೆಂಬಲಿಗರು ಏಕಾಏಕಿ ಬಿಜೆಪಿ ಬೆಂಬಲಿಗರ ಮೇಲೆರಗಿದರು. ಅವರೂ ತಿರುಗೇಟು ನೀಡಿದರು ಎಂದು ಸಹಾಯಕ ಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸುಬ್ರತಾ ಚಕ್ರವರ್ತಿ ತಿಳಿಸಿದ್ದಾರೆ.

ಎರಡೂ ಗುಂಪುಗಳನ್ನು ಚದುರಿಸಲು ಪೊಲೀಸರು ಯತ್ನಿಸಿದ್ದರು. ಆದರೆ ಪ್ರಯೋಜನವಾಗಲಿಲ್ಲ. ಬಳಿಕ ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು ಎಂದು ಅವರು ತಿಳಿಸಿದ್ದಾರೆ.

ಘರ್ಷಣೆಗೆ ಸಂಬಂಧಿಸಿ ತೆಲಿಯಾಮುರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.