ಪ್ರಾತಿನಿಧಿಕ ಚಿತ್ರ
ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯ ಮಹೇಶ್ ನಗರದ ಕೋಚಿಂಗ್ ಕೇಂದ್ರವೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಅಸ್ವಸ್ಥಗೊಂಡಿದ್ದ 10 ಮಂದಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಿಲ ಸೋರಿಕೆ ಶಂಕೆಯಿಂದಾಗಿ ಸಂಸ್ಥೆಯ ಹತ್ತು ಮಂದಿ ವಿದ್ಯಾರ್ಥಿಗಳು ತೀವ್ರ ಉಸಿರಾಟ ಸಮಸ್ಯೆ ಹಾಗೂ ತಲೆ ನೋವಿನಿಂದಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯುಕ್ತ ಆಹಾರ ಸೇವನೆಯಿಂದಾಗಿ ಈ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಏಳು ಮಂದಿಯನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೂವರನ್ನು ಚಿಕಿತ್ಸೆಗಾಗಿ ಬೇರೆಡೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೀಗ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.