ನಕ್ಸಲರು (ಪ್ರಾತಿನಿಧಿಕ ಚಿತ್ರ)
ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ 33 ನಕ್ಸಲರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ.
ಇವರಲ್ಲಿ 17 ನಕ್ಸಲರ ಪತ್ತೆಗಾಗಿ ₹ 49 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಆರ್‌ಪಿಎಫ್ ಪಡೆಯ ಮುಂದೆ 11 ಮಹಿಳೆಯರು ಸೇರಿದಂತೆ 33 ಮಂದಿ ಶರಣಾಗಿದ್ದಾರೆ.
‘ಮಾವೋವಾದದ ಪೊಳ್ಳು ಸಿದ್ದಾಂತ, ಗಿರಿಜನರ ಮೇಲಿನ ದೌರ್ಜನ್ಯಗಳಿಂದ ಇವರು ಬೇಸರಗೊಂಡಿದ್ದರು. ರಾಜ್ಯ ಸರ್ಕಾರದ ‘ನಿಯಾದ ನೆಲ್ಲನರ್’ (ನಿಮ್ಮ ಸುಂದರ ಗ್ರಾಮ) ಯೋಜನೆಯಿಂದ ಪ್ರಭಾವಿತರಾಗಿದ್ದರು ಎಂದು ಸುಕ್ಮಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.
ಛತ್ತೀಸಗಢದ ಮಾಡ್ ಮತ್ತು ಒಡಿಶಾದ ನೌಪಾಡದಲ್ಲಿ ಸಕ್ರಿಯರಾಗಿದ್ದ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ(ಪಿಎಲ್‌ಜಿಎ) ಉಪ ನಾಯಕ ಮುಚಾಕ ಜೋಗ, ಪತ್ನಿ ಮುಚಾಕಿ ಜೋಗಿ ಸೇರಿ ಹಲವರ ತಲೆಯ ಮೇಲೆ ಇನಾಮು ಘೋಷಿಸಲಾಗಿತ್ತು.
ಸುಕ್ಮಾ ಸೇರಿ 7 ಜಿಲ್ಲೆಗಳನ್ನು ಒಳಗೊಂಡ ನಕ್ಸಲ್ ಬಾಧಿತ ಬಸ್ತಾರ್ ಪ್ರದೇಶದಲ್ಲಿ ಕಳೆದ ವರ್ಷ 792 ನಕ್ಸಲರು ಶರಣಾಗಿದ್ದರು. ಶರಣಾದ ನಕ್ಸಲರಿಗೆ ಸರ್ಕಾರ ತಲಾ ₹ 50,000 ನೆರವು ಮತ್ತು ಪುನರ್‌ವಸತಿ ಕಲ್ಪಿಸುತ್ತಿದೆ.
ಶರಣಾದ ಏಳು ಕಾರ್ಯಕರ್ತರ ತಲೆಗೆ ತಲಾ ₹ 2 ಲಕ್ಷ, ಇನ್ನೊಬ್ಬನ ತಲೆಗೆ ₹50 ಸಾವಿರ ಇನಾಮು ಇತ್ತು. ಶರಣಾದ ಇತರ ಕಾರ್ಯಕರ್ತರು ಭದ್ರತಾ ಪಡೆಗಳ ಮೇಲಿನ ಬಹು ದಾಳಿಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್, ಜಿಲ್ಲಾ ಮೀಸಲು ಪಡೆ, CRPF ಮತ್ತು ಅದರ ಕೋಬ್ರಾ ಘಟಕ ಅವರ ಶರಣಾಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಅವರು ಹೇಳಿದರು.
ಶರಣಾದ ಎಲ್ಲಾ ನಕ್ಸಲರಿಗೆ ತಲಾ ₹ 50 ಸಾವಿರ ಸಹಾಯವನ್ನು ನೀಡಲಾಗಿದೆ. ಸರ್ಕಾರದ ನೀತಿಯ ಪ್ರಕಾರ ಅವರಿಗೆ ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಕಳೆದ ವರ್ಷ, ಸುಕ್ಮಾ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಲ್ಲಿ 792 ನಕ್ಸಲರು ಶರಣಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.