ADVERTISEMENT

ತೆಲಂಗಾಣ ಪೊಲೀಸರ ಮುಂದೆ ಆರು ಮಾವೋವಾದಿಗಳು ಶರಣು

ಪಿಟಿಐ
Published 14 ಅಕ್ಟೋಬರ್ 2025, 10:43 IST
Last Updated 14 ಅಕ್ಟೋಬರ್ 2025, 10:43 IST
   

ಹೈದರಾಬಾದ್: ಛತ್ತೀಸಗಢದ ನಿಷೇಧಿತ ಸಿಪಿಐನ(ಮಾವೋವಾದಿ) ಆರು ಸದಸ್ಯರು ಮಂಗಳವಾರ ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಹಿರಿಯ ನಕ್ಸಲೈಟ್ ಮಲ್ಲೊಜುಲ ವೇಣುಗೋಪಾಲ್ ಅಲಿಯಾಸ್ ಭೂಪತಿ ಮತ್ತು ಇತರ 60 ಕಾರ್ಯಕರ್ತರು ಪೊಲೀಸರ ಮುಂದೆ ಶರಣಾದ ಕೆಲವೇ ಗಂಟೆಗಳ ನಂತರ ಈ ಶರಣಾಗತಿ ನಡೆದಿದೆ.

ಸಿಆರ್‌ಪಿಎಫ್ ಸಹಯೋಗದೊಂದಿಗೆ ಪೊಲೀಸರು ನಡೆಸಿದ ಸಮುದಾಯ ಸಂಪರ್ಕ ಉಪಕ್ರಮವಾದ ‘ಆಪರೇಷನ್ ಚೆಯುತ’ ಅಡಿಯಲ್ಲಿ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳ ಜೊತೆಗೆ ತೆಲಂಗಾಣ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಆಕರ್ಷಿತರಾದ ಮಾವೋವಾದಿ ಕಾರ್ಯಕರ್ತರು ನಕ್ಸಲಿಸಂನ ಮಾರ್ಗವನ್ನು ತ್ಯಜಿಸಿ ತಮ್ಮ ಕುಟುಂಬಗಳೊಂದಿಗೆ ಶಾಂತಿಯುತ ಜೀವನವನ್ನು ನಡೆಸಲು ನಿರ್ಧಾರ ಮಾಡಿದ್ದಾರೆ ಎಂದು ಭದ್ರಾದ್ರಿ ಕೊಥಗುಡೆಮ್ ಪೊಲೀಸ್ ವರಿಷ್ಠಾಧಿಕಾರಿ ಬಿ. ರೋಹಿತ್ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಈ ವರ್ಷ ಇಲ್ಲಿಯವರೆಗೆ ವಿವಿಧ ಕೇಡರ್‌ಗಳ ಒಟ್ಟು 326 ಮಾವೋವಾದಿಗಳು ಭದ್ರಾದ್ರಿ ಕೊಥಗುಡೆಮ್ ಜಿಲ್ಲಾ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಎಸ್‌ಪಿ ಹೇಳಿದ್ದಾರೆ.

ತೆಲಂಗಾಣ ಸರ್ಕಾರವು ನೀಡಿರುವ ಸಮಗ್ರ ಪುನರ್ವಸತಿ ಯೋಜನೆಯ ಬೆಂಬಲದಿಂದ ಅವರೆಲ್ಲರೂ ಈಗ ಶಾಂತಿಯುತವಾಗಿ ಬದುಕುತ್ತಿದ್ದಾರೆ ಎಂದು ಅವರು ತಿಳಿಸಿದರು.

ಆಪರೇಷನ್ ಚೆಯುತ ಅಡಿಯಲ್ಲಿ, ರಸ್ತೆ ಸಂಪರ್ಕ, ಶಾಲೆಗಳು, ಆಸ್ಪತ್ರೆಗಳು, ಕುಡಿಯುವ ನೀರು, ವಿದ್ಯುತ್ ಇತ್ಯಾದಿಗಳಲ್ಲಿ ಸುಧಾರಣೆಗಳು ಸೇರಿದಂತೆ ವ್ಯಾಪಕ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

‘ದೂರದ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳನ್ನು ತಲುಪಿಸುವುದು ನಮ್ಮ ಗುರಿಯಾಗಿದೆ. ಅವರ ಸಿದ್ಧಾಂತದ ಮೇಲೆ ನಂಬಿಕೆ ಅಥವಾ ಭಯದಿಂದಾಗಿ ಮಾವೋವಾದಿ ಗುಂಪುಗಳೊಂದಿಗೆ ಸಹಕರಿಸುವುದು ಪ್ರಗತಿಯನ್ನು ತರುವುದಿಲ್ಲ ಎಂಬುದನ್ನು ಬುಡಕಟ್ಟು ಸಮುದಾಯಗಳು ಅರ್ಥಮಾಡಿಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳ ಮೂಲಕ ಮಾತ್ರ ನಿಜವಾದ ಅಭಿವೃದ್ಧಿಯನ್ನು ಸಾಧಿಸಬಹುದು’ಎಂದು ಹಿರಿಯ ಅಧಿಕಾರಿ ಹೇಳಿದರು.