ADVERTISEMENT

ಮುಂಬೈ, ಮಹಾರಾಷ್ಟ್ರದ ಭಾಷೆ ಮರಾಠಿ: ಸಿಎಂ ದೇವೇಂದ್ರ ಫಡಣವೀಸ್

ಆರ್‌ಎಸ್‌ಎಸ್‌ ನಾಯಕ ಸುರೇಶ್‌ ಭಯ್ಯಾಜಿ ಜೋಶಿ ಹೇಳಿಕೆಗೆ ಸ್ಪಷ್ಟನೆ

ಪಿಟಿಐ
Published 6 ಮಾರ್ಚ್ 2025, 9:43 IST
Last Updated 6 ಮಾರ್ಚ್ 2025, 9:43 IST

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್    

ಮುಂಬೈ: ‘ಮರಾಠಿಯು ಮುಂಬೈ ಮತ್ತು ಮಹಾರಾಷ್ಟ್ರದ ಭಾಷೆಯಾಗಿದ್ದು, ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ಮರಾಠಿಯನ್ನು ಕಲಿತು, ಮಾತನಾಡಬೇಕು’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಗುರುವಾರ ಪ್ರತಿಪಾದಿಸಿದರು.

‘ಮುಂಬೈಗೆ ಬರುವವರು ಮರಾಠಿ ಕಲಿತಿರಲೇಬೇಕಾದ ಅನಿವಾರ್ಯತೆ ಇಲ್ಲ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನಾಯಕ ಸುರೇಶ್‌ ಭಯ್ಯಾಜಿ ಜೋಶಿ ಅವರು ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು ಎಂದು ಶಿವಸೇನಾ (ಯುಬಿಟಿ) ಶಾಸಕ ಭಾಸ್ಕರ್‌ ಜಾಧವ್‌ ವಿಧಾನಸಭೆಯಲ್ಲಿ ಆಗ್ರಹಿಸಿದ್ದರು. ಇದಕ್ಕೆ ಫಡಣವೀಸ್‌ ಅವರು ಸದನದಲ್ಲಿ ಪ್ರತಿಕ್ರಿಯಿಸಿದರು.

‘ಮುಂಬೈ ಒಂದು ಭಾಷೆಗೆ ಸೀಮಿತವಾಗಿಲ್ಲ. ಇಲ್ಲಿ ಹಲವು ಭಾಷೆಗಳಿವೆ. ಕೆಲ ಪ್ರದೇಶಗಳು ತಮ್ಮದೇ ಆದ ಭಾಷೆಗಳನ್ನು ಹೊಂದಿವೆ. ಘಾಟ್ಕೋಪರ್‌ನಲ್ಲಿ ಗುಜರಾತಿ, ಗಿರ್ಗಾಂವ್‌ನಲ್ಲಿ ಹಿಂದಿ ಭಾಷೆ ಮಾತನಾಡುವವರು ಹೆಚ್ಚಿದ್ದಾರೆ. ಹೀಗಾಗಿ ಮುಂಬೈಗೆ ಬರುವವರು ಮರಾಠಿ ಕಲಿಯಲೇಬೇಕಾದ ಅನಿವಾರ್ಯತೆ ಇಲ್ಲ’ ಎಂದು ಜೋಶಿ ಹೇಳಿದ್ದರು.

ADVERTISEMENT

‘ಭಯ್ಯಾಜಿ ಅವರು ಏನು ಹೇಳಿದ್ದರು ಎಂಬುದು ನನಗೆ ಗೊತ್ತಿಲ್ಲ. ಆದರೆ, ಮುಂಬೈ ಮತ್ತು ಮಹಾರಾಷ್ಟ್ರದ ಭಾಷೆ ಮರಾಠಿ. ಪ್ರತಿಯೊಬ್ಬರೂ ಮರಾಠಿಯನ್ನು ಕಲಿತು, ಅದರಲ್ಲಿ ಮಾತನಾಡಬೇಕು’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ನಮ್ಮ ಸರ್ಕಾರ ಇತರ ಎಲ್ಲ ಭಾಷೆಗಳನ್ನೂ ಗೌರವಿಸುತ್ತದೆ. ನೀವು ನಿಮ್ಮ ಭಾಷೆಯನ್ನು ಪ್ರೀತಿಸಿ, ಗೌರವಿಸಿದಂತೆಯೇ ಇತರ ಭಾಷೆಗಳನ್ನೂ ಗೌರವಿಸಿ’ ಎಂದ ಅವರು, ‘ಇದಕ್ಕೆ ಭಯ್ಯಾಜಿ ಅವರ ಸಹಮತ ಇರುತ್ತದೆ ಎಂದು ಭಾವಿಸಿದ್ದೇನೆ’ ಎಂದರು.

ಎಂವಿಎ ಪ್ರತಿಭಟನೆ: ಆರ್‌ಎಸ್ಎಸ್‌ ನಾಯಕನ ಸುರೇಶ್‌ ಭಯ್ಯಾಜಿ ಜೋಶಿ ಅವರ ಹೇಳಿಕೆ ಖಂಡಿಸಿ ‘ಮಹಾ ವಿಕಾಸ್‌ ಅಘಾಡಿ’ಯ (ಎಂವಿಎ) ನಾಯಕರು ಮುಂಬೈನಲ್ಲಿ ಪ್ರತಿಭಟನೆ ನಡೆಸಿದರು. ಜೋಶಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಾನು ಸಿ.ಎಂ ಆಗಿದ್ದಾಗ ರಾಜ್ಯದಲ್ಲಿ ಮರಾಠಿಯನ್ನು ಕಡ್ಡಾಯಗೊಳಿಸಿದ್ದೆ. ಆರ್‌ಎಸ್‌ಎಸ್‌ ನಾಯಕ ಜೋಶಿ ಹೇಳಿಕೆಯು ಕಾನೂನು ಬಾಹಿರವಾಗಿದ್ದು ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು
ಉದ್ಧವ್‌ ಠಾಕ್ರೆ ಶಿವಸೇನಾ (ಯುಬಿಟಿ) ಮುಖ್ಯಸ್ಥ
ಮರಾಠಿ ಮುಂಬೈ ಭಾಷೆ: ಭಯ್ಯಾಜಿ ಸ್ಪಷ್ಟನೆ
ಮುಂಬೈ: ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೆ ಸ್ಪಷ್ಟನೆ ನೀಡಿರುವ ಆರ್‌ಎಸ್‌ಎಸ್‌ ನಾಯಕ ಸುರೇಶ್‌ ಭಯ್ಯಾಜಿ ಜೋಶಿ ‘ಮರಾಠಿ ಮುಂಬೈನ ಭಾಷೆಯಾಗಿದ್ದು ಹೊರಗಡೆಯಿಂದ ಬರುವ ಇತರ ಭಾಷಿಕರು ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿದರು. ‘ಮಾತೃ ಭಾಷೆಯಾದ ಮರಾಠಿ ಬಗ್ಗೆ ನನಗೆ ಹೆಮ್ಮೆಯಿದೆ. ಮರಾಠಿಯು ಮುಂಬೈ ಮತ್ತು ಮಹಾರಾಷ್ಟ್ರದ ಭಾಷೆ ಎಂಬುದರಲ್ಲಿ ಎರಡು ಮಾತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.