ADVERTISEMENT

ಭಾರತಕ್ಕೆ ನಾಳೆ ಕೆನಡಾ ಪ್ರಧಾನಿ ಕಾರ್ನಿ ಭೇಟಿ: ದ್ವಿಪಕ್ಷೀಯ ಸಂಬಂಧಕ್ಕೆ ಚೈತನ್ಯ!

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 10:34 IST
Last Updated 26 ಫೆಬ್ರುವರಿ 2026, 10:34 IST
ಮಾರ್ಕ್‌ ಕಾರ್ನಿ
ಮಾರ್ಕ್‌ ಕಾರ್ನಿ   

ಒಟ್ಟಾವಾ: ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ ಅವರು ನಾಳೆಯಿಂದ ನಾಲ್ಕು ದಿನಗಳವರೆಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಈ ಮೂಲಕ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಚೈತನ್ಯ ನೀಡುವ ಸಾಧ್ಯತೆ ಇದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ಮುಂಬೈಗೆ ಆಗಮಿಸುವ ಮಾರ್ಕ್‌ ಕಾರ್ನಿ ಮಾರ್ಚ್ 2ರವರೆಗೂ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಮಂತ್ರಿಯಾಗಿ ದೇಶಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.

ಮಾರ್ಕ್‌ ಕಾರ್ನಿ ಶುಕ್ರವಾರ ಮತ್ತು ಶನಿವಾರ ಮುಂಬೈನಲ್ಲಿ ವಿವಿಧ ವಾಣಿಜ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಭಾರತ ಮತ್ತು ಕೆನಡಾದ ಪ್ರಮುಖ ಕಾರ್ಪೊರೇಟ್ ಕಂಪನಿಗಳ ನಾಯಕರು, ಹಣಕಾಸು ತಜ್ಞರು ಹಾಗೂ ನಾವೀನ್ಯ ಕ್ಷೇತ್ರದ ಪರಿಣಿತರೊಂದಿಗೆ ಸಂವಾದ ನಡೆಸಲಿದ್ದಾರೆ.

ಕಾರ್ನಿ ಅವರು ಭಾನುವಾರ ದೆಹಲಿಗೆ ಆಗಮಿಸುವರು. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಯುರೇನಿಯಂ, ಇಂಧನ ಖನಿಜಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. 

2023ರಲ್ಲಿ ಖಾಲಿಸ್ತಾನ ಪ್ರತ್ಯೇಕತಾವಾದಿ ಹತ್ಯೆ ವಿಚಾರವಾಗಿ ಉಭಯ ದೇಶಗಳ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿತ್ತು. ಈ  ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಈ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸಿಖ್‌ ಪ್ರತ್ಯೇಕತಾವಾದಿ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದರು. ಭಾರತ ಈ ಆರೋಪವನ್ನು ಅಲ್ಲಗಳೆದಿತ್ತು. ಇಲ್ಲಿಂದ ಹದಗೆಟ್ಟಿದ್ದ ಭಾರತ–ಕೆನಡಾ ಸಂಬಂಧವನ್ನು ಸುಧಾರಿಸಲು ಕಾರ್ನಿ ಯತ್ನಿಸುತ್ತಿದ್ದಾರೆ.

ಕಾರ್ನಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಏಳು ದೇಶಗಳ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಅದೇ ರೀತಿ ಕಾರ್ನಿ ಸಂಪುಟದ ಹಲವು ಸಚಿವರೂ ಭಾರತಕ್ಕೆ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.