ಸಾಂದರ್ಭಿಕ ಚಿತ್ರ
ಮಥುರಾ: ಮಥುರಾದ ಜಮುನಪುರದ ಬೃಂದಾವನದ ಆಶ್ರಮವೊಂದರಲ್ಲಿ ಗುರುವಾರ ನಡೆದ ವೈದಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಸ್ಲಿಂ ಕುಟುಂಬವೊಂದರ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಮತಾಂತರಗೊಂಡವರು ತಮ್ಮ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದು, ತಮ್ಮ ಪೂರ್ವಜರ ನಂಬಿಕೆಗೆ ಮರಳಲು ಸ್ವಯಂ ಪ್ರೇರಿತವಾಗಿ ಮತಾಂತರಗೊಂಡಿದ್ದಾಗಿ ತಿಳಿಸಿದ್ದಾರೆ.
ಕುಟುಂಬದ ಮುಖ್ಯಸ್ಥರಾದ 50 ವರ್ಷದ ಜಾಕೀರ್ ತಮ್ಮ ಹೆಸರನ್ನು ಜಗದೀಶ್ ಎಂದು ಬದಲಿಸಿಕೊಂಡಿದ್ದಾರೆ. ಮೂಲತಃ ಶೇರ್‌ಗಢ ಪ್ರದೇಶದ ನಿವಾಸಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಮಾವನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯೇ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.
‘ಮೊಘಲ್ ಕಾಲದವರೆಗೂ ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಒತ್ತಡದಿಂದಾಗಿ ಅವರು ಇಸ್ಲಾಂಗೆ ಮತಾಂತರಗೊಂಡಿದ್ದರು. ಆದರೆ ಮನಸ್ಸು, ಮಾತು ಮತ್ತು ಕಾರ್ಯದಲ್ಲಿ ನಾನು ಕಾಳಿ ದೇವಿಯನ್ನು ಪೂಜಿಸುವುದನ್ನು ಮುಂದುವರೆಸಿದ್ದೇನೆ. ಗ್ರಾಮಸ್ಥರು ನನ್ನನ್ನು 'ಗತ್ ಜಿ ಎಂದು ಕರೆಯುತ್ತಾರೆ’ ಎಂದು ಜಗದೀಶ್ ತಿಳಿಸಿದ್ದಾರೆ.
ನನ್ನ ಕುಟುಂಬ ಮೂಲತಃ ಗುರ್ಜರ್ ಸಮುದಾಯಕ್ಕೆ ಸೇರಿದವರಾಗಿದ್ದು, ಮೂಲ ಬೇರಿಗೆ ಮರಳಲು ಮೂರು ವರ್ಷದಿಂದ ಯೋಚನೆ ಮಾಡುತ್ತಿದ್ದೆವು. ನಾವು ಹಿಂದೂ ಧರ್ಮದಲ್ಲಿ ಪೂರ್ಣ ನಂಬಿಕೆ ಇರಿಸಿದ್ದು, ಯಾವುದೇ ಒತ್ತಡದಿಂದ ಮತಾಂತರಗೊಂಡಿಲ್ಲ ಎಂದು ಹೇಳಿದ್ದಾರೆ.
ಬೃಂದಾವನದ ಶ್ರೀ ಜಿ ವಟಿಕಾ ಕಾಲೋನಿಯಲ್ಲಿರುವ ಭಗವತ್ ಧಾಮ್ ಆಶ್ರಮದಲ್ಲಿದ ನಡೆದ ಈ ಕಾರ್ಯಕ್ರಮವನ್ನು ಹಿಂದೂ ಯುವ ವಾಹಿನಿ ಸಂಘಟಿಸಿತ್ತು. ಸುಮಾರು ಒಂದು ಗಂಟೆ ನಡೆದ ಹೋಮ–ಯಜ್ಞದಲ್ಲಿ ಜಗದೀಶ್ ಅವರ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಪಾಲ್ಗೊಂಡಿದ್ದರು.
ಮತಾಂತರದ ನಂತರ, ಜಾಕೀರ್ – ಜಗದೀಶ್, ಅವರ ಪತ್ನಿ ಗುಡ್ಡಿ – ಗುಡಿಯಾ, ಹಿರಿಯ ಮಗ ಅನ್ವರ್ – ಸುಮಿತ್, ಕಿರಿಯ ಮಗ ರನ್ವರ್ – ರಾಮೇಶ್ವರ್, ಸೊಸೆ ಸಬೀರಾ – ಸಾವಿತ್ರಿ, ಮತ್ತು ಮೊಮ್ಮಕ್ಕಳಾದ ಸಬೀರ್, ಜೋಯಾ ಮತ್ತು ನೇಹಾ ಅವರನ್ನು ಕ್ರಮವಾಗಿ ಶತ್ರುಘ್ನ, ಸರಸ್ವತಿ ಮತ್ತು ಸ್ನೇಹಾ ಎಂದು ಹೆಸರು ಬದಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.