ADVERTISEMENT

ಕನಿಷ್ಠ ಆದಾಯ ಖಾತರಿ: ಮಾಯಾವತಿ ಲೇವಡಿ

ಪಿಟಿಐ
Published 29 ಜನವರಿ 2019, 20:15 IST
Last Updated 29 ಜನವರಿ 2019, 20:15 IST
   

ಲಖನೌ: ಬಡವರಿಗಾಗಿ ಕನಿಷ್ಠ ಆದಾಯ ಖಾತರಿ ಯೋಜನೆ ಅನುಷ್ಠಾನ ಕುರಿತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೀಡಿರುವ ಭರವಸೆಯನ್ನುಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಲೇವಡಿ ಮಾಡಿದ್ದಾರೆ. ಇದು ಸಹ ‘ಗರೀಬಿ ಹಟಾವೋ’ ಅಥವಾ ‘ಅಚ್ಛೇ ದಿನ’ ಎಂಬ ‘ಕ್ರೂರ ತಮಾಷೆ’ಯಂತಾದರೆ ಆರ್ಶ್ಚರ್ಯ ಪಡಬೇಕಿಲ್ಲ ಎಂದಿದ್ದಾರೆ.

‘ಬಡತನ ನಿವಾರಣೆ ಹಾಗೂ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಿ. ಇದರಿಂದ ರಾಷ್ಟ್ರಮಟ್ಟದಲ್ಲೂ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬಹುದು ಎಂಬ ನಂಬಿಕೆ ಜನರಲ್ಲಿ ಮೂಡಲಿದೆ’ ಎಂದು ರಾಹುಲ್‌ ಗಾಂಧಿ ಅವರಿಗೆ ಮಾಯಾವತಿ ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ನ ‘ಗರೀಬಿ ಹಟಾವೋ’ ಅಥವಾ ಬಡವರ ಬ್ಯಾಂಕ್‌ ಖಾತೆಗೆ ₹15 ಲಕ್ಷದಿಂದ ₹20 ಲಕ್ಷ ಜಮೆ ಮಾಡಲಾಗುವುದು ಎಂದು ಈಗಿರುವ ಕೇಂದ್ರದ ಬಿಜೆಪಿ ಸರ್ಕಾರದ ‘ಅಚ್ಛೇ ದಿನ’ದ ಭರವಸೆಯಂತೆ ಇದೂ ಸುಳ್ಳು ಆಗಬಾರದು. ರಾಹುಲ್‌ ಹೇಳಿಕೆ ಜನರಲ್ಲಿ ಅಚ್ಚರಿ ಮತ್ತು ಅನುಮಾನ ಮೂಡಿಸಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನೀಡುವ ಭರವಸೆಗಳು ಎಂದಿಗೂ ಈಡೇರಿಲ್ಲ. ಕೇವಲ ಕಣ್ಣೊರೆಸುವ ತಂತ್ರ ಮಾಡುತ್ತ ಬಂದಿವೆ. ಕಾಂಗ್ರೆಸ್‌ ಹಾಗೂ ಬಿಜೆಪಿಯನ್ನು 72 ವರ್ಷಗಳಿಂದ ಜನರು ನೋಡುತ್ತ ಬಂದಿದ್ದಾರೆ. ಆದರೆ, ಬಿಎಸ್‌ಪಿ ಇಂಥ ಸುಳ್ಳು ಭರವಸೆಗಳನ್ನು ನೀಡದೇ, ಉತ್ತಮ ಕೆಲಸ ಮಾಡಲಿದೆ ಎಂದು ಮಾಯಾವತಿ ಭರವಸೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.